ಬೆಂಗಳೂರು: ಬೊಮ್ಮನಹಳ್ಳಿಯ ಹೊಂಗಸಂದ್ರದ ಕಾರ್ಮಿಕರಿಗೆ ಕೊರೊನಾ ಸೋಂಕು ದೃಢಪಟ್ಟ ಕಾರಣ ಅವರ ಜೊತೆ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ನಲ್ಲಿಡಲಾಗಿದೆ.
ಇಲ್ಲಿ ಸುಮಾರು 30ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಅವರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಇವರನ್ನು ಪಿಜಿಯಲ್ಲಿ ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಕೆಲವರು ಸಿಗರೇಟ್, ಗುಟ್ಕಾ ಬೇಕೆಂದು ಗಲಾಟೆ ಮಾಡಿ ಹೊರಗಡೆ ಬಿಡುವಂತೆ ಹಠ ಮಾಡಿದ್ದಾರಂತೆ. ಉತ್ತಮವಾದ ಊಟ ನೀಡಿದ್ರೂ ಕ್ವಾರಂಟೈನ್ನಲ್ಲಿರುವವರ ಗಲಾಟೆ ಬಿಬಿಎಂಪಿ ಹಾಗೂ ಅವರನ್ನು ನೋಡಿಕೊಳ್ಳುತ್ತಿರುವವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಹೊಂಗಸಂದ್ರದಲ್ಲಿ ನಿರಂತರ ಪಾಸಿಟಿವ್ ಪ್ರಕರಣ ಏರಿಕೆ ಹಿನ್ನಲೆ, ಕಾರ್ಮಿಕರು ವಾಸವಿದ್ದ ಸ್ಥಳದಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಸಂಪೂರ್ಣ ಸುರಕ್ಷಾ ಕಿಟ್ ನೀಡಲಾಗಿದೆ. ಸೋಂಕಿತರೆಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಹಲವೆಡೆ ಸುತ್ತಾಟ ನಡೆಸಿದ್ದಾರೆ. ಇವರು ಸುತ್ತಾಡಿರುವ ಸ್ಥಳಗಳಲ್ಲಿ ಸೋಂಕು ಹಬ್ಬಿರುವ ಭೀತಿ ಹೆಚ್ಚಾಗಿದೆ. ಈ ಕಾರಣ ಸುತ್ತಲಿನ ಎಲ್ಲಾ ಪ್ರದೇಶಗಳ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು, ಮನೆಯಿಂದ ಹೊರಬರದಂತೆ ಕಟ್ಟೆಚ್ಚರ ವಹಿಸಿ ಮನೆ ಬಾಗಿಲಿಗೆ ಅಗತ್ಯ ವಸ್ತು ಪೂರೈಕೆ ಮಾಡುತ್ತಿದ್ದಾರೆ.