ಬೆಂಗಳೂರು: ಸ್ಯಾಂಟ್ರೋ ರವಿ ಹಗರಣದಲ್ಲಿ ತಮ್ಮ ಮೇಲೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ನಾನು ಸ್ವಚ್ಛವಾಗಿದ್ದೇನೆ. ಯಾರ್ಯಾರೋ ಬಂದು ನಮ್ಮ ಜೊತೆ ಫೋಟೋ ತೆಗೆಸಿಕೊಳ್ಳುತ್ತಿರುತ್ತಾರೆ. ಅದನ್ನು ಇಟ್ಟುಕೊಂಡು ಆರೋಪ ಮಾಡಿದ್ರೆ ಹೇಗೆ? ಎಂದು ತಿರುಗೇಟು ನೀಡಿದ್ದಾರೆ. ವಿಕಾಸಸೌಧದಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಪ್ರಕರಣವನ್ನು ಸಿಐಡಿ ತಂಡಕ್ಕೆ ತನಿಖೆಗೆ ಆದೇಶ ಮಾಡಲಾಗಿದೆ. ಸ್ವತಂತ್ರವಾಗಿ ತನಿಖೆ ಮಾಡಲು ಅವಕಾಶ ಕೊಟ್ಟಿದ್ದೇವೆ. ಯಾವ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ. ಏನು ಮಾಹಿತಿ ಇದೆ ಎಂಬುದನ್ನು ತಿಳಿದು ತನಿಖೆ ಮಾಡುತ್ತಾರೆ. ಪೊಲೀಸ್ ಹಗರಣದ ತನಿಖೆಯನ್ನು ಸಿಐಡಿಗೆ ಕೊಟ್ಟಿದ್ದೇವೆ. ಅದು ತನಿಖೆ ನಡೆದು ಕೆಲವರ ಬಂಧನ ಆಗಿದೆ. ಯಾರು ಹೊರಗಡೆ ಮಾತನಾಡುತ್ತಾರೋ ಅವರು ಸಾಕ್ಷಿ ಕೊಡಲಿ ಎಂದು ಸವಾಲು ಹಾಕಿದರು.
ಯಾರ್ಯಾರೋ ಫೋಟೋ ತೆಗೆಸಿಕೊಂಡಿದ್ದನ್ನು ಇಟ್ಟುಕೊಂಡು ಚರ್ಚೆ ಮಾಡುವವರ ಬಗ್ಗೆ ನಾನು ಮಾತನಾಡಲ್ಲ. ಇದನ್ನು ಇಟ್ಟುಕೊಂಡು ಸಣ್ಣ ಮಟ್ಟದಲ್ಲಿ ಟೀಕೆ ಮಾಡುವವರ ಬಗ್ಗೆ ಏನು ಮಾತನಾಡೋದು. ಎಲ್ಲಾ ಮಾಹಿತಿ ತೆಗೆದುಕೊಂಡು ತನಿಖೆ ಮಾಡಬೇಕಾಗುತ್ತದೆ. ಒಂದೇ ದಿನದಲ್ಲಿ ಇದೆಲ್ಲಾ ಆಗೋದಿಲ್ಲ. ಪಿಎಸ್ಐ ಹಗರಣವನ್ನು ಸಿಐಡಿ ತನಿಖೆಗೆ ಕೊಟ್ಟೆವು. ಎಲ್ಲರದ್ದೂ ಹೊರಗೆ ಬಂತು. ಇದು ಕೂಡ ಹಾಗೆ, ಎಲ್ಲಾ ಹೊರಗೆ ಬರುತ್ತದೆ. ಕೇಸ್ ಕೋರ್ಟ್ ನಲ್ಲಿ ಇರುವುದರಿಂದ ಗೃಹ ಸಚಿವರಾಗಿ ಏನೇ ಮಾತನಾಡಿದ್ರೂ ತಪ್ಪು ಆಗುತ್ತದೆ ಎಂದು ಹೇಳಿದರು.
ಏನೂ ಮಾಡದೆ ಅಧಿಕಾರದಿಂದ ಇಳಿದ ಹೆಚ್ಡಿಕೆ : ಈ ಸರ್ಕಾರ ಹಾದಿ ಬೀದಿ ಸರ್ಕಾರ ಯಾವುದೇ ಕೆಲಸ ಮಾಡುತ್ತಿಲ್ಲ ಎಂಬ ಹೆಚ್ಡಿಕೆ ಆರೋಪ ವಿಚಾರಕ್ಕೆ ತಿರುಗೇಟು ನೀಡಿದ ಗೃಹ ಸಚಿವರು, ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಏನೂ ಮಾಡಲು ಆಗದೆ ಇದ್ದವರು. ಯಾರ ಯಾರೋ ಬೆಂಬಲದಿಂದ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ, ರಾಜ್ಯದ ಜನರಿಗೆ ಏನೂ ಮಾಡದೇ ಅಧಿಕಾರದಿಂದ ಕೆಳಗಿಳಿದರು. ಅವರ ಬಗ್ಗೆ ಏನೂ ಮಾತನಾಡಲ್ಲ. ಈ ಸರ್ಕಾರ ಏನು ಮಾಡಿದೆ ಎಂದು ರಾಜ್ಯದ ಜನರಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಚುನಾವಣೆಯಲ್ಲಿ ಪಕ್ಷ ನಿಲ್ಲು ಎಂದರೆ ನಿಲ್ಲುತ್ತೇನೆ : ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷ ಟಿಕೆಟ್ ಕೊಟ್ಟು ನಿಲ್ಲಿ ಅಂದರೆ ನಿಲ್ಲುತ್ತೇನೆ. ಪಕ್ಷ ಏನು ಹೇಳುತ್ತದೋ ಅದನ್ನು ನಾನು ಮಾಡುತ್ತೇನೆ. ಅಧಿಕಾರ ಇದ್ದರೂ ಕೆಲಸ ಮಾಡುತ್ತೇನೆ. ಇಲ್ಲದೇ ಇದ್ದರೂ ಕೆಲಸ ಮಾಡುತ್ತೇನೆ. ಐದು ಬಾರಿ ಸೋತಿದ್ದೇನೆ, ಆಗ ಕುಗ್ಗಲಿಲ್ಲ. ನಾಲ್ಕು ಬಾರಿ ಗೆದ್ದಿದ್ದೇನೆ, ಆಗಲೂ ಹಿಗ್ಗಲಿಲ್ಲ. ಸೈದ್ಧಾಂತಿಕವಾಗಿ ಬೆಳೆದವರು ನಾವು. ನಾಲ್ಕು ಬಾರಿ ಶಾಸಕ ಆದರೂ ಸಚಿವ ಸ್ಥಾನ ಕೊಟ್ಟಿರಲಿಲ್ಲ, ಆಗ ನಾನು ಏನೂ ಕೇಳಿರಲಿಲ್ಲ. ಈಗ ಪಕ್ಷ ಕೊಟ್ಟಿದೆ. ಪಕ್ಷ ಏನೂ ತೀರ್ಮಾನ ಮಾಡುತ್ತೋ ಅದನ್ನು ಪಾಲಿಸುತ್ತೇವೆ ಎಂದು ಗೃಹ ಸಚಿವರು ಹೇಳಿದರು.
ಪೊಲೀಸ್ ಇಲಾಖೆಗೆ ಆದ್ಯತೆ ಕೊಡುತ್ತಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಪೊಲೀಸ್ ಇಲಾಖೆಗೆ ಯಾವುದೇ ಸರ್ಕಾರ ಕೊಡದ ಆದ್ಯತೆಯನ್ನು ನಮ್ಮ ಸರ್ಕಾರ ಕೊಟ್ಟಿದೆ. ಹಲವು ಪೊಲೀಸರಿಗೆ ಡಬಲ್ ಬೆಡ್ ರೂಮ್ ಮನೆ ಕಟ್ಟಿಸಿಕೊಟ್ಟು ಕೀ ಕೂಡ ಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.
ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಟೌನ್ ಹಾಲ್ ನಲ್ಲಿ ಶನಿವಾರ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಗೋಪಾಲಗೌಡರ ಕಿರುಪರಿಚಯದ ಪುಸ್ತಕವನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಬಿಡುಗಡೆ ಮಾಲಿದ್ದಾರೆ. ಕನ್ನಡ ನಾಡು ಕಂಡ ಅಪರೂಪದ ರಾಜಕಾರಣಿ ಗೋಪಾಲಗೌಡರು. ಪರಿಶುದ್ಧ ಸಾರ್ವಜನಿಕ ಜೀವನದಲ್ಲಿ ಬದುಕಿದ್ದ ವ್ಯಕ್ತಿ. ಈಗಲೂ ರಾಜಕಾರಣಿಗಳಿಗೆ ರೋಲ್ ಮಾಡೆಲ್ ಆಗಿದ್ದ ವ್ಯಕ್ತಿ. ಗೋಪಾಲಗೌಡರು ಹುಟ್ಟಿ ನೂರು ವರ್ಷ ಆಗಿದೆ. ಅವರ ಶತಮಾನೋತ್ಸವ ನಾಡಿನಲ್ಲಿ ಆಚರಿಸಲು ತೀರ್ಮಾನ ಮಾಡಲಾಗಿದೆ. ಕಾಗೋಡಿನ ಭೂಮಿಯಿಂದ ಮೃತ್ತಿಕೆ ತರುತ್ತಿದ್ದಾರೆ. ರಾಜ್ಯ ಮಟ್ಟದ ಶತಮಾನೋತ್ಸವ ಕಾರ್ಯಕ್ರಮ ಇದಾಗಿರಲಿದೆ ಎಂದು ಹೇಳಿದರು.
ಇದನ್ನೂ ಓದಿ: ಆರ್.ಡಿ.ಪಾಟೀಲ್ ಆಡಿಯೋ: ತನಿಖಾಧಿಕಾರಿಯ ತಪ್ಪಿದ್ದರೆ ನಿರ್ದಾಕ್ಷಿಣ್ಯ ಕ್ರಮ- ಸಿಎಂ ಬೊಮ್ಮಾಯಿ