ಆನೇಕಲ್: ಮಂಗಳಮುಖಿಯರು ಎಂದ್ರೆ ಸಮಾಜ ಮೂಗು ಮುರಿಯೋ ಪರಿಸ್ಥಿತಿ ಇದೆ. ಅದರಲ್ಲೂ ಕೊರೊನಾ ಸಂಕಷ್ಟಕ್ಕೆ ನೇರವಾಗಿ ಗುರಿಯಾಗಿದ್ದು ತ್ರಿಲಿಂಗಿಗಳು. ಹಾದಿ ಬೀದಿಯಲ್ಲಿ ಸೊಗಸಾಗಿ ನುಲಿಯುತ್ತಾ ಕೈಚಾಚುವ ಕೈಗಳಿಗೆ ತೀವ್ರ ಬರೆ ಎಳೆದಿತ್ತು. ಸಾಮಾನ್ಯ ಕಾಲದಲ್ಲಿಯೂ ಸಾರ್ಥಕತೆ, ನಿರ್ದಿಷ್ಟ ಗೊತ್ತು-ಗುರಿಯಿಲ್ಲದೆ ಸದಾ ನಿರ್ಲಕ್ಷ್ಯದ ನೆಲೆಯಲ್ಲಿ ಅಭದ್ರತೆಯ ನೋವು ಅನುಭವಿಸಿದವರಿಗೇ ಗೊತ್ತು.
ಇದೀಗ ಇಂತಹ ದುಗುಡ ಸಂಕಟಗಳನ್ನೂ ಮೀರಿ ಏನಾದರೂ ಸಾಧಿಸಿ ಮಾದರಿಯಾಗಿ ಸ್ವಾಭಿಮಾನವನ್ನು ಮೆರೆಯಬೇಕೆಂದು ಮೈಕೊಡವಿ ಮೇಲೆದ್ದಂತಿದೆ ಇಲ್ಲಿನ ಮಂಗಳಮುಖಿಯರ ಸಾಧನೆ.
ಹೌದು, ಧರ್ಮಸ್ಥಳ ಸ್ವಸಹಾಯ ಗುಂಪಿನ ಸಿಬ್ಬಂದಿ ಈ ಶೋಷಿತ ಸಮುದಾಯಕ್ಕೆ ಧೈರ್ಯ ತುಂಬುವ ಜೊತೆಗೆ ಸಣ್ಣ ಉದ್ಯಮದ ಸಹಾಯ ನೀಡಿದ್ದು, ಐವರು ಮಂಗಳಮುಖಿಯರೊಂದಿಗೆ ಆರು ಮಂದಿ ಮಹಿಳೆಯರನ್ನು ಒಗ್ಗೂಡಿಸಿ, ದೊಮ್ಮಸಂದ್ರದಲ್ಲಿ ನೆಲೆಸಿರುವ ಮಾತಾಶ್ರೀ ಗುಂಪು ಮರಳುಗಾಡಿನಲ್ಲೂ ಓಯಸಿಸ್ ಕಂಡಂತೆ ಕೊರೊನಾ ಸಂದರ್ಭದಲ್ಲಿ ಯಶಸ್ಸು ಕಂಡು ಇತರೆ ಮಂಗಳಮುಖಿಯರಿಗೆ ಮಾದರಿಯಾಗಿ ನಿಂತಿದ್ದಾರೆ.
ದೊಮ್ಮಸಂದ್ರ-ಚಂದಾಪುರ ಮುಖ್ಯ ರಸ್ತೆಯ ಬದಿಯಲ್ಲಿ ರುಚಿ ಶುಚಿಯಾದ ಹೋಟೆಲ್, ಚಿಲ್ಲರೆ ಅಂಗಡಿ ನಡೆಸುವ ಮುಖಾಂತರ ಇತರೆ ಮನೆ ಕೆಲಸದ ಮಹಿಳೆಯರಿಗೆ ನೆರವು ನೀಡಿ ಬದುಕಲು ದಾರಿ ದೀಪವಾಗಿದ್ದಾರೆ.