ಬೆಂಗಳೂರು: ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ. ಎಲ್ಲಾ ಕಾರ್ಯಕ್ರಮಗಳನ್ನು ಬದಿಗೊತ್ತಿ ಅನ್ನದಾತರ ಏಳಿಗೆಗಾಗಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುತ್ತೇನೆ ಎಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಶಿಕಾರಿಪುರ ಪುರಸಭಾ ಸದಸ್ಯನಾಗಿದ್ದ ನನ್ನನ್ನು ಏಳು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಆ ತಾಲೂಕಿನ ಜನರನ್ನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಕೇಂದ್ರದ ಹಿರಿಯ ನಾಯಕರ ಸಹಕಾರ, ಬೆಂಬಲದಿಂದ ನಾನಿಲ್ಲಿ ನಿಂತಿದ್ದೇನೆ. ರಾಷ್ಟ್ರಪತಿ, ಪ್ರಧಾನಿ, ಉಪರಾಷ್ಟ್ರಪತಿ, ಲೋಕಸಭಾ ಸ್ಪೀಕರ್ ಸೇರಿದಂತೆ ಕೇಂದ್ರದ ನಾಯಕರು ಶುಭ ಕೋರಿದ್ದಾರೆ. ಅವರೆಲ್ಲರ ಪ್ರತಿನಿಧಿಯಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮನ ಸಂತಸ ತಂದಿದೆ ಎಂದರು.
ಮೂರೂಕಾಲು ವರ್ಷದಲ್ಲಿ ಮಾದರಿ ರಾಜ್ಯವನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದೇನೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಕ್ಕಿಲ್ಲದಿರುವುದು ಬೇಸರದ ಸಂಗತಿ. ಅನ್ನದಾತ ಇನ್ನೂ ಸಂಕಷ್ಟದಲ್ಲಿ ಇರವುದು ಯಾರಿಗೂ ಗೌರವ ತರುವುದಿಲ್ಲ. ಹಾಗಾಗಿ ನೀರಾವರಿಗೆ ಆದ್ಯತೆಗೆ ಶಕ್ತಿ ಮೀರಿ ಪ್ರಯತ್ನ ನಡೆಸುತ್ತೇನೆ. ಬೇರೆಲ್ಲಾ ಕಾರ್ಯಕ್ರಮ ಬದಿಗೊತ್ತಿ ಅನ್ನದಾತರ ಪರ ಯೋಜನೆಗಳಿಗೆ ಆದ್ಯತೆ ನೀಡುತ್ತೇನೆ. ಅದಕ್ಕೆ ಸಿದ್ದರಾಮಯ್ಯ ಅವರ ಸಂಪೂರ್ಣ ಸಹಕಾರ ಇದೆ ಎಂದು ಭಾವಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಅನಂತ್ ಕುಮಾರ್ ಬದುಕಿರಬೇಕಿತ್ತು. ನಾವಿಬ್ಬರೂ ಹಗಲು ರಾತ್ರಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಇಬ್ಬರು ಶಾಸಕರಿದ್ದ ಸಂಖ್ಯೆಯನ್ನು ಇಲ್ಲಿಗೆ ತಂದಿದ್ದೇವೆ. ಇದಕ್ಕೆ ಅನಂತ್ ಕುಮಾರ್ ಕೊಡುಗೆಯೂ ಕಾರಣ ಎಂದು ಸ್ಮರಿಸಿದರು. ರಾಜಕೀಯ ಜೀವನ, ಚುನಾವಣಾ ಬದುಕಿನಲ್ಲಿ ಹೋರಾಟ, ಸಂಘರ್ಷ ಸಹಜ. ಅದು ಪಕ್ಷದ ಒಳಗೂ ಆಗಬಹುದು ಹೊರಗೂ ಆಗಬಹುದು. ಆದರೆ ಅದನ್ನೆಲ್ಲಾ ಮೆರೆತು ಎಲ್ಲರೂ ಒಟ್ಟಾಗಿ ಸೇರಿದ್ದು ಸಂತಸ ತಂದಿದೆ. ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಒಟ್ಟಾಗಿ ಕೆಲಸ ಮಾಡೋಣ ಎಂದರು.
ಮಾಜಿ ಸಿಎಂ ಎಸ್.ಎಂ.ಕೃಷ್ಣ ಮಾತನಾಡಿ, ಯಡಿಯೂರಪ್ಪ ನಮ್ಮ ಜಿಲ್ಲೆಯವರು ಅನ್ನೋ ಹೆಮ್ಮೆ ನನಗಿದೆ. ನಮ್ಮ ಜಿಲ್ಲೆಯ ಎರಡನೇ ಮುಖ್ಯಮಂತ್ರಿ ಯಡಿಯೂರಪ್ಪ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿ ಜಿಲ್ಲೆಯ ಅಭಿವೃದ್ಧಿ ಎದ್ದು ಕಾಣಿಸುವಂತೆ ನಮಗೆಲ್ಲ ತೋರಿಸಿಕೊಟ್ರು. ಕೆಲವು ಮುಖ್ಯಮಂತ್ರಿ ಕೈಯಲ್ಲಿ ಕಮಾಲ್ ಮಾಡುವ ಶಕ್ತಿ ಇರುತ್ತೆ. ಯಡಿಯೂರಪ್ಪ ಅಂಥ ಕಮಾಲ್ ಮಾಡೋರು ಎಂದರು. ಯಡಿಯೂರಪ್ಪ ಅವರಿಗೆ ಭಯಂಕರ ಸಿಟ್ಟು ಬರುತ್ತದೆ. ಆದರೆ ಆ ಸಿಟ್ಟು ಜಾಸ್ತಿ ಹೊತ್ತು ಇರಲ್ಲ. ಬಂದಷ್ಟೇ ವೇಗದಲ್ಲಿ ಸಿಟ್ಟು ಮಾಯವಾಗಿಬಿಡುತ್ತದೆ. ಯಡಿಯೂರಪ್ಪ ಅವರ ಒಂದು ಮಾತು ನನ್ನ ಕಿವಿಯಲ್ಲಿ ಮಾರ್ಧನಿಸುತ್ತಿರುತ್ತದೆ. ಸದನದಲ್ಲಿ ಯಡಿಯೂರಪ್ಪ ಕೊಳ್ಳೆ ಹೊಡಿತಿದೀರಿ, ಕೊಳ್ಳೆ ಹೊಡಿತೀದೀರಿ ಅಂತ ಹೇಳ್ತಿದ್ರು. ಅವರ ಮಾತಿನ ಶೈಲಿ ಅದು ಎಂದರು.
ಯಡಿಯೂರಪ್ಪ ವಿರೋಧ ಪಕ್ಷದಲ್ಲಿದ್ದಾಗ ನಾನು ಕಾಂಗ್ರೆಸ್ನಲ್ಲಿದ್ದೆ. ಆ ಕಾಲಘಟ್ಟದಲ್ಲಿ ನಾನು ಬಿಜೆಪಿಗೆ ಬರ್ತೀನಿ ಅಂತಾ ಭಾವಿಸಿರಲಿಲ್ಲ. ರಾಜಕೀಯದಲ್ಲಿ ಶಾಶ್ವತ ಗೆಳೆಯರೂ ಇಲ್ಲ ಶಾಶ್ವತ ವಿರೋಧಿಗಳೂ ಇರಲ್ಲ. ಸಿದ್ದರಾಮಯ್ಯ ಈ ಸಮಾರಂಭಕ್ಕೆ ಬಂದಿದ್ದು ನನಗೆ ವಿಶೇಷ ಸಮಾಧಾನ ತಂದಿದೆ. ರಾಜಕಾರಣ ಹೀಗೆಯೇ ಇರಬೇಕು. ಭಿನ್ನಾಭಿಪ್ರಾಯಗಳಿರಬಹುದು, ಭಿನ್ನಾಭಿಪ್ರಾಯ ಹೊರತಾಗಿ ಮಾನವೀಯ ಸಂಬಂಧ, ಮೌಲ್ಯ ಮುಖ್ಯ. ಹಾಗಾಗಿ ಸಿದ್ದರಾಮಯ್ಯ ಬಂದಿದ್ದಕ್ಕೆ ವಿಶೇಷ ಅರ್ಥ ಇದೆ. ರಾಜಕಾರಣ ಹೊರಗೆ ಮಾತ್ರ. ಇಲ್ಲಿ ಸೇರಿರುವುದು ರಾಜ್ಯದ ಅಭಿವೃದ್ಧಿಗೆ ತನ್ನೆಲ್ಲ ಶಕ್ತಿ ಧಾರೆ ಎರೆದ ನಾಯಕನಿಗೆ ಅಭಿಮಾನ, ಗೌರವ ತೋರಲು. ಇದೇ ಕರ್ನಾಟಕದ ಸಂಪ್ರದಾಯ ಎಂದರು. ಯಡಿಯೂರಪ್ಪ ನನಗಿಂತ ಹತ್ತು ವರ್ಷ ಚಿಕ್ಕವರು. ನಾನು ಯಡಿಯೂರಪ್ಪ ಅವರಿಗೆ ಶುಭ ಹಾರೈಸಲೂಬಹುದು, ಆಶೀರ್ವಾದ ಮಾಡಲೂಬಹುದು. ಅದು ನನ್ನ ವಯಸ್ಸಿನ ಹಿರಿತನದ ಹಕ್ಕು ಎಂದರು.
ನಂತರ ಬೃಹತ್ ಕೇಕ್ ಕತ್ತರಿದ ಸಿಎಂ, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳಿಂದ ಅಭಿನಂದನೆ ಸ್ವೀಕರಿಸಿದರು.