ಬೆಂಗಳೂರು: ರಾಯಚೂರು ಜಿಲ್ಲೆಯ ಮಲ್ಲಟ ಗ್ರಾಮದ ವಿವಾದಿತ ಜಮೀನಿನಲ್ಲಿ ಖಾಸಗಿ ಕಂಪನಿ ಸೋಲಾರ್ ವಿದ್ಯುತ್ ಸ್ಥಾವರ ನಿರ್ಮಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದು ಪಡಿಸಿದೆ. ಸಿಂಧನೂರಿನ ಜೆಎಂಎಫ್ಸಿ ನ್ಯಾಯಾಲಯ ವಿವಾದಿತ ಜಮೀನಿನಲ್ಲಿ ಸೋಲಾರ್ ಸ್ಥಾವರ ಹಾಕದಂತೆ ನೀಡಿದ್ದ ಆದೇಶ ಪ್ರಶ್ನಿಸಿ ಹಿಂದುಜಾ ರಿನಿವಬಲ್ ಟೂ ಪ್ರೈವೇಟ್ ಲಿಮಿಟೆಡ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ನ ಕಲಬುರಗಿ ಪೀಠದ ನ್ಯಾ. ಸಿ. ಎಂ ಪೂಣಚ ಅವರಿದ್ದ ನ್ಯಾಯಪೀಠ ಈ ಸೂಚನೆ ಅಧೀನ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದ್ದು, ಕಂಪನಿ ಅರ್ಜಿ ತಿರಸ್ಕರಿಸಿದೆ. ಅಲ್ಲದೇ, ಜಮೀನಿನ ಕುರಿತು ಕುಟುಂಬದಲ್ಲಿ ವ್ಯಾಜ್ಯ ಬಾಕಿ ಇದೆ. ಈ ಸಂದರ್ಭದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಶಾಶ್ವತ ನಿರ್ಮಾಣಕ್ಕೆ ಅವಕಾಶ ನೀಡದಂತೆ ನಿರ್ದೇಶಿಸಿದೆ.
ಜತೆಗೆ, ಜಮೀನಿನ ಮಾಲೀಕತ್ವದ ಕುರಿತಂತೆ ವಿಚಾರಣಾ ನ್ಯಾಯಾಲಯದಲ್ಲಿ ವಿವಾದ ಕುರಿತು ಪ್ರಕರಣ ದಾಖಲಾದ ಬಳಿಕ ಕಂಪನಿ ಅದೇ ಜಮೀನಿನಲ್ಲಿ ಸೋಲಾರ್ ಸ್ಥಾವರ ನಿರ್ಮಾಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪಡೆದು ಕೊಂಡಿದೆ. ಈ ಬೆಳವಣಿಗೆಯ ಕಂಪೆನಿ ನಡೆ ಸಂಶಯಕ್ಕೆ ಕಾರಣವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಪ್ರಕರಣದ ಹಿನ್ನೆಲೆ ಏನು? : ರಾಯಚೂರಿನ ಮಲ್ಲಟ ಗ್ರಾಮದ ನಿವಾಸಿ ಮಲ್ಲೇಶ್ಗೌಡ ಎಂಬುವರು ಮೃತಪಟ್ಟಿದ್ದು, ಅವರ ಮಕ್ಕಳು ತಮ್ಮ ಜಮೀನಿನಲ್ಲಿ ಸೋಲಾರ್ ಸ್ಥಾವರ ನಿರ್ಮಾಣಕ್ಕೆ ಹಿಂದುಜಾ ರಿನಿವಬಲ್ ಟೂ ಪ್ರೈವೇಟ್ ಲಿಮಿಟೆಡ್ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರು. ಈ ನಡುವೆ ಮಲ್ಲೇಶ್ಗೌಡ ಅವರ ಮೊಮ್ಮಕ್ಕಳಾದ ರಾಹುಲ್ ಪಾಟೀಲ್ ಮತ್ತು ಅಂಕಿತ ಎಂಬ ಇಬ್ಬರು ಅಪ್ರಾಪ್ತ ಮಕ್ಕಳು ತಮ್ಮ ತಾತ ದಿವಂಗತ ಮಲ್ಲೇಶ್ಗೌಡ ಅವರ ಆಸ್ತಿಯಲ್ಲಿ ಆರನೇ ಒಂದು ಭಾಗ ತಮಗೆ ಸಿಗಬೇಕು ಎಂದು ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ವಿವಾದಿತ ಜಮೀನಿನಲ್ಲಿ ಯಾವುದೇ ರೀತಿಯ ಶ್ವಾಶ್ವತ ಕಟ್ಟಡಗಳ ನಿರ್ಮಾಣ ಮಾಡದಂತೆ ನಿರ್ಬಂಧ ವಿಧಿಸಿ ಆದೇಶಿಸಿತ್ತು.
ಅಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿದಾರ ಕಂಪೆನಿ, ಸೋಲಾರ್ ಸ್ಥಾವರ ಅಳವಡಿಸುವುದಕ್ಕೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. 26 ಮ್ಯೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ 146 ಕೋಟಿ ರು. ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ. ಇದಕ್ಕಾಗಿ ಸರ್ಕಾರ ಎಲ್ಲ ರೀತಿಯ ಅನುಮತಿ ನೀಡಿದೆ. ಆದ್ದರಿಂದ ಅಧೀನ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಮರುಪರೀಕ್ಷೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್