ಬೆಂಗಳೂರು: ಕೊರೊನಾ ಪರಿಣಾಮ ರಾಜ್ಯದ ಶಾಲೆಗಳಲ್ಲಿ ಹಾಗೂ ಅಂಗನವಾಡಿಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಯ ಮಕ್ಕಳಿಗೆ ಸಮಾನವಾಗಿ ಆಹಾರ ಹಂಚಿಕೆಯಾಗಬೇಕು. ಆಹಾರ ಹಂಚಿಕೆಯಲ್ಲಿ ಜಿಲ್ಲೆಗಳ ಮಧ್ಯೆ ಯಾವುದೇ ತಾರತಮ್ಯ ಮಾಡಬಾರದು ಎಂದು ಹೈಕೋರ್ಟ್ ಸೂಚಿಸಿದೆ.
ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ರೊಜಾರಿಯೋ ವಾದಿಸಿ, ಲಾಕ್ಡೌನ್ ಬಳಿಕ ಸರ್ಕಾರಿ ಶಾಲೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಅಂಗನವಾಡಿಗಳಿಗೆ ಪೂರೈಸುತ್ತಿದ್ದ ಆಹಾರ ಪದಾರ್ಥಗಳನ್ನು ಜುಲೈಯಿಂದ ಸ್ಥಗಿತ ಮಾಡಲಾಗಿದೆ. ಇದರಿಂದ ಮಕ್ಕಳಿಗೆ ಅಪೌಷ್ಟಿಕತೆ ಕಾಡುತ್ತಿದೆ. ಮತ್ತೊಂದೆಡೆ ಬಾಲ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದು ವಿವರಿಸಿದರು.
ಸರ್ಕಾರಿ ವಕೀಲರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಅರ್ಹ ಮಕ್ಕಳಿಗೆ ಆಹಾರ ತಲುಪಿಸುವ ಕುರಿತು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿ ಪ್ರಮಾಣಪತ್ರ ಸಲ್ಲಿಸಿದರು. ಆದರೆ ಸರ್ಕಾರದ ಪರ ವಕೀಲರು ಸಲ್ಲಿಸಿದ ಪ್ರಮಾಣಪತ್ರ ಸಮರ್ಪಕವಾಗಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದ ಪೀಠ, ಸರ್ಕಾರದ ಯೋಜನೆ ಏನೆಂಬುದು ಸ್ಪಷ್ಟವಾಗಿಲ್ಲ. ಆಹಾರ ಹಂಚಿಕೆಯ ಬಗ್ಗೆ ಜಿಲ್ಲೆಗಳ ಮಧ್ಯೆ ಯಾವುದೇ ತಾರತಮ್ಯ ಮಾಡಬಾರದು. ಎಲ್ಲಾ ಜಿಲ್ಲೆಗಳ ಅರ್ಹರಿಗೂ ಸಮಾನವಾಗಿ ಆಹಾರ ಹಂಚಿಕೆ ಮಾಡಬೇಕು. ಹೀಗಾಗಿ ಸ್ಪಷ್ಟ ಮಾಹಿತಿಯೊಂದಿಗೆ ಹೊಸದಾಗಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 23ಕ್ಕೆ ಮುಂದೂಡಿತು.