ಬೆಂಗಳೂರು: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ ಸಂಬಂಧ ಮೌಲ್ಯಮಾಪನ ನಡೆಸಿ ವರದಿ ಸಲ್ಲಿಸಬೇಕು. ಅಲ್ಲದೇ ಈಗ ಲಭ್ಯವಿರುವ ಸಮೀಕ್ಷೆ ವರದಿ ಪರಿಶೀಲಿಸಬೇಕು. ಅಗತ್ಯಾನುಸಾರ ತಜ್ಞರ ನೆರವು ಪಡೆದುಕೊಳ್ಳುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಹುಬ್ಬಳ್ಳಿ - ಅಂಕೋಲಾ ರೈಲು ಮಾರ್ಗ ಯೋಜನೆಯಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿನ ಅಪರೂಪದ ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯು ಹೈಕೋರ್ಟ್ನಲ್ಲಿ ನಡೆಯಿತು. ಪ್ರಾಜೆಕ್ಟ್ ವೃಕ್ಷ ಫೌಂಡೇಷನ್ ಮತ್ತು ಗಿರಿಧರ್ ಕುಲಕರ್ಣಿ ಎಂಬವರಿಂದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು.
ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು, ಅಭಿವೃದ್ಧಿ ಕಾರ್ಯ ನಡೆಯಬೇಕು ಹಾಗೂ ವನ್ಯಜೀವಿಗಳಿಗೆ ತೊಂದರೆಯೂ ಆಗಬಾರದು ಎಂದರು.
ಹುಬ್ಬಳ್ಳಿ-ಅಂಕೋಲಾ ನಡುವೆ 164.44 ಕಿ.ಮೀ ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ 2020ರ ಮಾರ್ಚ್ 20ರಂದು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಅನುಮತಿ ನೀಡಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಲಸಿಕೆ ಹಾಕಲು ಹೋದ ವೇಳೆ ಕುರಿಗಾಯಿ, ವ್ಯಕ್ತಿಯೊಬ್ಬನ ಹೈಡ್ರಾಮ: ಮನೆಗಳಿಗೆ ನುಗ್ಗಿ ವ್ಯಾಕ್ಸಿನ್ ಹಾಕಿದ ಸಿಬ್ಬಂದಿ.. VIDEO