ಬೆಂಗಳೂರು: ರಾಜ್ಯಗ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಸದ್ಯಕ್ಕೆ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಎಂದು ಹೈಕೋರ್ಟ್ ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳಿಗೆ ನಿರ್ದೇಶಿಸಿದೆ.
ಕನ್ನಡ ಕಲಿಕೆ ಕಡ್ಡಾಯ ಮಾಡಿರುವ ಸರ್ಕಾರದ ಆದೇಶ ರದ್ದು ಕೋರಿ ಸಂಸ್ಕೃತ ಭಾರತಿ ಟ್ರಸ್ಟ್ ಹಾಗೂ ಸಂಸ್ಕೃತ ಪ್ರಾಧ್ಯಾಪಕ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ. ನರಗುಂದ, ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರದಿಂದ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಮಾಹಿತಿ ನೀಡಲು ಒಂದಷ್ಟು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಕೋರಿಕೆ ಪುರಸ್ಕರಿಸಿದ ಪೀಠ, ಅರ್ಜಿಯ ಮುಂದಿನ ವಿಚಾರಣೆವರೆಗೆ ಕನ್ನಡ ಕಡ್ಡಾಯ ವಿಚಾರದಲ್ಲಿ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ಸರ್ಕಾರ ಹಾಗೂ ವಿವಿಗಳಿಗೆ ಸೂಚಿಸಿ ವಿಚಾರಣೆಯನ್ನು ಡಿ, 16ಕ್ಕೆ ಮುಂದೂಡಿತು.
ಹಿಂದಿನ ವಿಚಾರಣೆ ವೇಳೆ, ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಕೇಂದ್ರ ಸರ್ಕಾರ ನಿಲುವು ತಿಳಿಸುವಂತೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಬಹುದೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಕೇಳಿತ್ತು.
ಇದನ್ನೂ ಓದಿ: ರಾಜ್ಯದಲ್ಲಿಂದು 236 ಜನರಲ್ಲಿ ಕೋವಿಡ್: ಏಳು ಮಂದಿ ಸೋಂಕಿತರ ಸಾವು