ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ದಾಖಲೆ ಮಳೆಯಾಗಿದ್ದು, ಚಳಿಯ ಆಟ ಶುರುವಾಗಿದೆ. ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಶೀತ ಅಧಿಕವಾಗಿದೆ. ರಾಜಧಾನಿಯಲ್ಲಿಂದು ಕನಿಷ್ಠ ತಾಪಮಾನ ದಾಖಲಾಗಿದ್ದು, ಜನರು ಬೆಳಗ್ಗೆ ಚಳಿಗೆ ನಡುಗುವಂತಾಗಿದೆ.
ಈ ವರ್ಷದ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳ ಮೊದಲೆರಡು ವಾರಗಳಲ್ಲಿ ದಾಖಲೆ ಮಳೆ ಸುರಿದಿತ್ತು. ಈ ಹಿನ್ನೆಲೆ ಕಾರ್ತಿಕ ಮಾಸ ಆರಂಭಕ್ಕೂ ಮುನ್ನವೇ ರಾಜಧಾನಿಯಲ್ಲಿ ಚಳಿ ಕಾಣಿಸಿಕೊಂಡಿದೆ. ಬೆಳಗ್ಗೆ 8 ಗಂಟೆಯವರೆಗೂ ಚಳಿ ಕೊರೆಯುತ್ತಿದೆ. ಸಂಜೆ 6 ಗಂಟೆಯ ವೇಳೆ ವಾತಾವರಣ ತಂಡಿಯಿಂದ ಕೂಡಿದ್ದು, ತಾಪಮಾನ ದಾಖಲೆ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದೆ.
ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆಯೇ ದಟ್ಟವಾದ ಮಂಜು ಆವರಿಸಿಕೊಳ್ಳುತ್ತಿದೆ. ಬಯಲು ಪ್ರದೇಶಗಳಲ್ಲೂ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಮಧ್ಯಾಹ್ನದ ಹೊತ್ತು ಬಿಸಿಲಿದ್ದರೂ ತಂಪಾದ ಗಾಳಿ ಜೋರಾಗಿ ಬೀಸುತ್ತಿದ್ದು, ಚಳಿಯ ಅನುಭವವಾಗುತ್ತಿದೆ.
ಬಿಸಿಲೂರಿನಲ್ಲೂ ಚಳಿ ದಾಖಲು: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ವೇಳೆ ಸಹಜವಾಗಿರಬೇಕಿದ್ದ ಬಿಸಿಲು ಕಡಿಮೆಯಾಗಿ ಜನರು ತಂಡಿ ಅನುಭವಿಸುತ್ತಿದ್ದಾರೆ. ವಾತಾವರಣದಲ್ಲಿನ ತೇವಾಂಶ ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡಿದೆ. ಇದು ಈಶಾನ್ಯ ದಿಕ್ಕಿನ ಕಡೆಗೆ ಸಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಮೋಡ ರಹಿತ ಆಕಾಶ ಸೃಷ್ಟಿಯಾಗುತ್ತಿದೆ. ಭೂಮಿಯಿಂದ ಹೊರಸೂಸುವ ಶಾಖ ಹರಡಿ, ಚಳಿಯನ್ನು ಹೆಚ್ಚುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಎಷ್ಟು ತಾಪಮಾನ: ಬೆಂಗಳೂರಿನಲ್ಲಿ 28 ರಿಂದ 17 ಡಿಗ್ರಿ ಸೆಲ್ಸಿಯಸ್, ಮೈಸೂರು 29 - 18, ಚಾಮರಾಜನಗರ 29 - 18, ರಾಮನಗರ 30-18, ಮಂಡ್ಯ 30-18, ಬೆಂಗಳೂರು ಗ್ರಾಮಾಂತರ 28-17, ಚಿಕ್ಕಬಳ್ಳಾಪುರ 27-15, ಕೋಲಾರ 28-17 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದೆ.
ಓದಿ: ಬಿರಿಯಾನಿ ಜಗಳ: ಪತ್ನಿಗೆ ಬೆಂಕಿಯಿಟ್ಟು ಅದೇ ಬೆಂಕಿಯಲ್ಲಿ ಸುಟ್ಟು ಕರಕಲಾದ ಪತಿ!