ಬೆಂಗಳೂರು : ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ತಮ್ಮ ಕ್ಷೇತ್ರದ ವ್ಯಕ್ತಿಯೊಬ್ಬರಿಗೆ ಮದ್ಯದ ಮಳಿಗೆ ತೆರೆಯಲು ಅನುಮತಿ ನೀಡುವಂತೆ ಎಂಎಸ್‍ಐಎಲ್‍ಗೆ ಶಿಫಾರಸು ಮಾಡಿದ್ದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ವಿಧಾನಸಭಾ ಕ್ಷೇತ್ರವಾರು ಕೋಟಾ ನಿಗದಿಪಡಿಸಿ ಮದ್ಯದಂಗಡಿ ತೆರೆಯಲು ಎಂಎಸ್‍ಐಎಲ್‍ಗೆ ಲೈಸೆನ್ಸ್ ನೀಡುವ ಸಂಬಂಧ 2016ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದು ಪಡಿಸುವಂತೆ ಬೀದರ್ನ ಸೋಮನಾಥ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯಿತು. ಈ ವೇಳೆ ಅರ್ಜಿದಾರರು ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಸಚಿವರು ತಮ್ಮ ಕ್ಷೇತ್ರದ ಬಾಲಾಜಿ ಎಂಬುವರಿಗೆ ಔರಾದ್ ತಾಲೂಕಿನ ಮುಧೋಳ ಗ್ರಾಮದಲ್ಲಿ ಎಂಎಸ್‍ಐಎಲ್ ಮಳಿಗೆ ತೆರೆಯಲು ಅನುಮತಿ ನೀಡುವಂತೆ ಶಿಫಾರಸು ಮಾಡಿದ್ದಾರೆ.
ಈತನ ಸೋದರರಾದ ಸಂತೋಷ್ ಮತ್ತು ಸುನೀಲ್ ಎಂಬುವರಿಗೆ ಈ ಮಳಿಗೆಯಲ್ಲಿ ಕೆಲಸ ಮಾಡಲು ಅನುಕೂಲವಾಗುವಂತೆ ಆದೇಶ ಹೊರಡಿಸಲು ಸೂಚಿಸಿ ಎಂಎಸ್‍ಐಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎಂದು 2019ರ ಡಿ.19ರಂದು ಬರೆದ ಪತ್ರವನ್ನು ಪೀಠಕ್ಕೆ ಸಲ್ಲಿಸಿದರು. ಶಿಫಾರಸು ಪತ್ರ ಗಮನಿಸಿದ ಪೀಠ ಸಚಿವರ ವಿರುದ್ಧ ತೀವ್ರ ಅಸಮಧಾನ ವ್ಯಕ್ತಪಡಿಸಿತು. ಸಚಿವರು ಮಾಡುವ ಕೆಲಸ ಇದಲ್ಲ. ಇಂತಹ ಬೆಳವಣಿಗೆ ಒಳ್ಳೆಯದಲ್ಲ.
ಇದು ಅಧಿಕಾರದ ದುರುಪಯೋಗ. ಹೀಗಾಗಿ ಪ್ರಕರಣದಲ್ಲಿ ಸಚಿವರನ್ನು ಪ್ರತಿವಾದಿಯನ್ನಾಗಿ ಸೇರಿಸಿ ಎಂದು ಅರ್ಜಿದಾರರಿಗೆ ಸೂಚಿಸಿತು. ನಂತರ ರಾಜ್ಯ ಸರ್ಕಾರ, ಅಬಕಾರಿ ಆಯುಕ್ತರು, ಬೀದರ್ ಜಿಲ್ಲಾಧಿಕಾರಿ, ಜಿಲ್ಲಾ ಅಬಕಾರಿ ಆಯುಕ್ತ, ಎಂಎಸ್‍ಐಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿತು.