ಬೆಂಗಳೂರು: ರಾಷ್ಟ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಆರ್ಬಿಐನಿಂದ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದ ಹಣ ತೆಗೆದುಕೊಂಡಿದೆ. ಹಿಂದೆಂದೂ ಕೇಂದ್ರಬ್ಯಾಂಕಿನಿಂದ ಇಷ್ಟೊಂದು ಹಣ ಪಡೆದಿರಲಿಲ್ಲ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಕಳವಳ ವ್ಯಕ್ತಪಡಿಸಿದ್ರು.
ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿಂದು ಕಾಂಗ್ರೆಸ್ ಮುಖಂಡ ದಯಾನಂದಮೂರ್ತಿ ಸೇರಿದಂತೆ ಹಲವು ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಭಾರಿ ಮಟ್ಟದಲ್ಲಿ ವಿದೇಶಿ ಹೂಡಿಕೆ ಬಂದಿದೆ ಎಂದು ಹೇಳುತ್ತಿದೆ. ಆದರೆ, ಹಲವು ಸರ್ಕಾರಿ ಇಲಾಖೆಗಳ ನೌಕರರಿಗೆ ಸಂಬಳ ಆಗಿಲ್ಲ. ಸರ್ಕಾರಿ ಸ್ವಾಮ್ಯದ ಹಲವು ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿದೆ. ಇದ್ರಿಂದಾಗಿ ಜನರು ಉದ್ಯೋಗ ಕಳೆದುಕೊಳ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ರು.
ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಯಾವ ಪರಿಸ್ಥಿತಿ ನಿರ್ಮಾಣವಾಗಿದೆ? ಎಂಬುದು ಗೊತ್ತಿದೆ. ಇನ್ನೂ ಹಲವು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರ ಒಡೆತನಕ್ಕೆ ಕೊಡುವ ಸಾಧ್ಯತೆ ಇದೆ. ಮಾಜಿ ಪ್ರಧಾನಿ ದಿ. ವಾಜಪೇಯಿ ಕಾಲದಲ್ಲಿ ಅಶೋಕ ಹೋಟೆಲ್ ಮಾರಿದಂತೆ ಕೆಲವನ್ನು ಮಾರಾಟ ಮಾಡಿದರೂ ಅಚ್ಚರಿಯಿಲ್ಲ. ಏನೇನೂ ಮಾಡ್ತಾರೋ, ನಾನಂತೂ ಪಾರ್ಲಿಮೆಂಟ್‌ನಲ್ಲಿ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಪ್ರವಾಹದಿಂದಾಗಿ ಅನೇಕ ಸಾವುನೋವು ಸಂಭವಿಸಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರದಿಂದ ಅನುದಾನ ತರಲು ಪಕ್ಷದ ನಿಯೋಗ ಕರೆದೊಯ್ಯುವುದಾಗಿ ಹೇಳಿದ್ದಾರೆ. ಅವರ ಸಾಮರ್ಥ್ಯದ ಬಗ್ಗೆ ನಾನು ಪ್ರಶ್ನೆ ಮಾಡುವುದಿಲ್ಲ ಎಂದರು.
ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಮೂವರು ಉಪಮುಖ್ಯಮಂತ್ರಿಗಳಾಗಿದ್ದಾರೆ. ಜಾತಿಗೊಂದು ಅಂತಾ ಮಾಡಿದ್ರೆ, ಇನ್ನೂ ಹಲವು ಜಾತಿಗಳಿವೆ. ಇವರನ್ನು ಯಾವ ರೀತಿಯ ಲೆಕ್ಕಾಚಾರದ ಆಧಾರದಲ್ಲಿ ಆಯ್ಕೆ ಮಾಡಿದ್ದಾರೆಂಬುದನ್ನು ಯಡಿಯೂರಪ್ಪ ಅವರೇ ಸ್ಪಷ್ಟಪಡಿಸಬೇಕು ಎಂದು ಟೀಕಿಸಿದ್ರು.
ತಮ್ಮ ವಿರುದ್ಧ ಕಿಡಿಕಾರಿರುವ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಲು ಹೆಚ್.ಡಿ.ದೇವೇಗೌಡರು ನಿರಾಕರಿಸಿದ್ದಾರೆ. ಕಾಗಿನೆಲೆ ಶ್ರೀಗಳು ಬಹಳ ದೊಡ್ಡವರು. ಹೀಗಾಗಿ ಅವರ ಬಗ್ಗೆ ಮಾತನಾಡುವುದಿಲ್ಲವೆಂದು ನಯವಾಗಿ ಹೇಳಿದರು. ದೇವೇಗೌಡರು ಮತೊಮ್ಮೆ ಹುಟ್ಟಿ ಬಂದರೂ ಸಿದ್ದರಾಮಯ್ಯ ಹೆಸರು ಹಾಳು ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯರಿಗೆ ಸರಿಸಾಟಿ ಯಾರು ಇಲ್ಲ ಎಂದು ಎಂದು ಶ್ರೀಗಳು ಮೊನ್ನೆ ಹೇಳಿಕೆ ನೀಡಿದ್ದರು.