ಬೆಂಗಳೂರು: ರದ್ದುಗೊಂಡಿರುವ ಭ್ರಷ್ಟಾಚಾರ ನಿಗ್ರಹ ದಳದಿಂದ ಪೊಲೀಸ್ ಇಲಾಖೆಗೆ ಹಂಚಿಕೆ ಮಾಡಿರುವ 221 ಹುದ್ದೆಗಳನ್ನು ಮರುಹಂಚಿಕೆ ಮಾಡಲು ಸರ್ಕಾರ ಸಹಮತಿ ನೀಡಿ ಆದೇಶಿಸಿದೆ. ಎಸಿಬಿಯಿಂದ 221 ಹುದ್ದೆ ವಿವಿಧ ಘಟಕಗಳಿಗೆ ಮರು ಹಂಚಿಕೆ ಮಾಡಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಪೊಲೀಸ್ ಉಪಾಧೀಕ್ಷಕರ (ಸಿವಿಲ್) 17 ಹುದ್ದೆಗಳಲ್ಲಿ 8 ಹುದ್ದೆಗಳನ್ನು ವಿವಿಧ ಘಟಕಗಳಿಗೆ ಹಾಗೂ ಹೊಸದಾಗಿ ತೆರೆಯಲಾಗುವ 9 ಪೊಲೀಸ್ ಉಪ ವಿಭಾಗಗಳಿಗೆ ಮರುಹಂಚಿಕೆ ಮಾಡಬೇಕು. ಬೆಂಗಳೂರು ನಗರದ ಸುಗಮ ಸಂಚಾರ ನಿರ್ವಹಣೆಗಾಗಿ ಬೆಂಗಳೂರು ನಗರದಲ್ಲಿ ಹೊಸದಾಗಿ ತೆರೆಯಲಾಗುವ 4 ಸಂಚಾರ ಪೊಲೀಸ್ ಠಾಣೆಗಳಿಗೆ 4 ಇನ್ಸ್ಪೆಕ್ಟರ್, 25 ಹೆಡ್ ಕಾನ್ಸ್ಟೇಬಲ್, 75 ಕಾನ್ಸ್ಟೇಬಲ್, 21 ಎಹೆಚ್‌ಸಿ, 40 ಎಪಿಸಿ ಸೇರಿ 165 ಹುದ್ದೆಗಳ ಮರುಹಂಚಿಕೆಗೆ ಸೂಚಿಸಲಾಗಿದೆ.
ಎಸಿಬಿಯಿಂದ ಪೊಲೀಸ್ ಇಲಾಖೆಗೆ ಹಿಂತಿರುಗಿಸಲಾಗಿರುವ 37 ಪಿ.ಐ ಹುದ್ದೆಗಳಲ್ಲಿ, 4 ಪಿ.ಐ ಹುದ್ದೆಗಳನ್ನು ಹೊಸ 4 ಸಂಚಾರ ಪೊಲೀಸ್ ಠಾಣೆಗಳಿಗೆ ಬಳಸಿಕೊಂಡ ನಂತರ ಉಳಿಯುವ 33 ಪಿ.ಐ ಹುದ್ದೆಗಳನ್ನು ಹಾಗೂ ಹಾಲಿ ಪೊಲೀಸ್ ವೃತ್ತಗಳಲ್ಲಿರುವ 7 ಸಿ.ಪಿ.ಐ ಹುದ್ದೆಗಳನ್ನು ಬಳಸಿಕೊಂಡು ಒಟ್ಟು 40 ಪೊಲೀಸ್ ಠಾಣೆಗಳನ್ನು ಪಿ.ಐ ಠಾಣೆಗಳನ್ನಾಗಿ ಪರಿವರ್ತಿಸಲು ಸರ್ಕಾರ ಸಹಮತಿಸಿದೆ.
ಎಸಿಬಿಯಿಂದ ಪೊಲೀಸ್ ಇಲಾಖೆಗೆ ಹಿಂತಿರುಗಿಸಲಾಗಿರುವ 1 ಪಿ.ಐ (ಸಶಸ್ತ್ರ) ಹುದ್ದೆಯನ್ನು ಪೊಲೀಸ್ ಅಧೀಕ್ಷಕರು, ದಕ್ಷಿಣ ಕನ್ನಡ ಜಿಲ್ಲೆ ಘಟಕಕ್ಕೆ ಹಂಚಿಕೆ ಮಾಡಿಕೊಳ್ಳಬೇಕು. ಹೊಸ ಉಪವಿಭಾಗ/ಸಂಚಾರಿ ಠಾಣೆ ಹಾಗೂ ಮೇಲ್ದರ್ಜೆಗೇರಿಸಿರುವ ಠಾಣೆಗಳಿಗೆ ಎಸಿಬಿಯಿಂದ ಹಿಂದಿರುಗಿಸಿರುವ ಸಿಬ್ಬಂದಿಯನ್ನೇ ಮರುಹಂಚಿಕೆ ಮಾಡಿಕೊಳ್ಳುವ ಷರತ್ತಿಗೊಳಪಟ್ಟು ಆದೇಶಿಸಿದೆ.
ಇದನ್ನೂ ಓದಿ: ಎಸಿಬಿಯಿಂದ ಲೋಕಾಯುಕ್ತಕ್ಕೆ ಡಿವೈಎಸ್ಪಿ, ಇನ್ಸ್ಪೆಕ್ಟರ್ಗಳ ವರ್ಗಾವಣೆ