ಬೆಂಗಳೂರು : ಹ್ಯಾಟ್ರಿಕ್ ಗೆಲುವು ಸಾಧಿಸಿದ ಮಹಾಲಕ್ಷ್ಮಿ ಕ್ಷೇತ್ರದ ಗೆಲುವು ಸಾಧಿಸಿರುವ ಅಭ್ಯರ್ಥಿ ಕೆ.ಗೋಪಾಲಯ್ಯ ಮತ ಎಣಿಕೆ ಕೇಂದ್ರದಲ್ಲೇ ಮಧ್ಯಾಹ್ನದ ಊಟ ಮಾಡಿದರು. ಚುನಾವಣಾ ಫಲಿತಾಂಶ ಘೋಷಣೆಯಾದ ಬಳಿಕವೇ ಪತ್ನಿ ಹಾಗೂ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಊಟ ಮಾಡಿದ್ದಾರೆ.
ಪಲಾವ್, ಅನ್ನ ಸಾಂಬಾರ್ ತಿಂದು ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಜನತೆ ಮತ್ತೆ ಮತ ನೀಡಿ ತಮ್ಮ ಪ್ರೀತಿ ತೋರಿಸಿದ್ದಾರೆ. ಬಿಜೆಪಿಯ ಎಲ್ಲಾ ನಾಯಕರು ಜೊತೆ ನಿಂತು ಗೆಲ್ಲಿಸಿದ್ದಾರೆ. ಅನರ್ಹರು ಅನ್ನೋ ವಿಚಾರವಾಗಿ ಮಾತನಾಡಿದ ಅವರು, ಐದು ತಿಂಗಳಿಂದ ಇದು ನೋವನ್ನ ತರಿಸಿತ್ತು. ಜನ ತೀರ್ಪು ನೀಡಿ ಗೆಲ್ಲಿಸಿದ್ದಾರೆ ಎಂದರು.
ಸಚಿವ ಸ್ಥಾನ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಅವರು ಕೊಟ್ಟ ಖಾತೆ ನಿಭಾಯಿಸುತ್ತೇನೆ. ನಾವು ರಾಜಕಾರಣದಲ್ಲಿ ತುಂಬಾ ಚಿಕ್ಕವರು. ಎಲ್ಲಾ ಒಗ್ಗಟ್ಟಾಗಿ ಚುನಾವಣೆ ಗೆದ್ದಿದ್ದೇವೆ ಎಂದರು.