ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡಲು ಕ್ಯಾಬಿನೆಟ್ ಸಮ್ಮತಿ ಸೂಚಿಸಿದ್ದು, 311 ಕೋಟಿ ರೂ. ವೆಚ್ಚದಲ್ಲಿ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಇಲ್ಲಿವರೆಗೆ ಎಸ್ಸಿ-ಎಸ್ಟಿ ಸಮುದಾಯದ ಮಕ್ಕಳಿಗೆ ಮಾತ್ರ ಉಚಿತ ಲ್ಯಾಪ್‌ಟಾಪ್ ನೀಡಲಾಗುತ್ತಿತ್ತು. ಇದೀಗ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಈಗ ಪದವಿಗೆ ಸೇರುವ ಮತ್ತು ಎರಡನೇ ವರ್ಷದ ಡಿಗ್ರಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ. ಅದರಂತೆ ಸುಮಾರು 1.09 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡಲಾಗುವುದು.
ಅರಣ್ಯ ಇಲಾಖೆ ನಿಯಮಾವಳಿಗೆ ತಿದ್ದುಪಡಿ:
ಅರಣ್ಯ ಇಲಾಖೆಯಲ್ಲಿನ ಗಾರ್ಡ್ ಹಾಗೂ ವಾಚರ್ಸ್ಗಳ ನೇಮಕಾತಿ ವೇಳೆ 30% ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಅಲ್ಲದೆ ಅರಣ್ಯದಲ್ಲಿ ವಾಸಿಸುವವರಿಗೆ ಮೀಸಲಾತಿ ನೀಡಲು ಸಹ ತೀರ್ಮಾನ ಕೈಗೊಳ್ಳಲಾಗಿದೆ. ಆ ಮೂಲಕ ಅರಣ್ಯ ವಾಸಿಗಳನ್ನು ಹೆಚ್ಚಿಗೆ ಭಾಗೀದಾರರನ್ನಾಗಿ ಮಾಡಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಮುಜರಾಯಿ ದೇವಸ್ಥಾನ ಸಿಬ್ಬಂದಿ ವೇತನ ಪರಿಷ್ಕರಣೆ:
ಮುಜರಾಯಿ ಇಲಾಖೆಯಡಿ ಬರುವ ದೇವಾಸ್ಥಾನಗಳ ಸಿಬ್ಬಂದಿಯ ವೇತನ ಪರಿಷ್ಕರಣೆಗೆ ಸಂಪುಟ ಸಭೆ ನಿರ್ಧರಿಸಿದೆ.
ಮುಜರಾಯಿ ಇಲಾಖೆ ದೇವಸ್ಥಾನದಲ್ಲಿ ಸುಮಾರು 3,500 ಅರ್ಚಕರು, ಮತ್ತಿತರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಡಿ ಮತ್ತು ಸಿ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಸರ್ಕಾರಿ ಕೆಲಸಕ್ಕೆ ಸಮನಾದ ವೇತನ ಸಿಗಬೇಕು ಎಂದು ಸಂಪುಟ ತೀರ್ಮಾನಿಸಿದೆ. ದೇವಸ್ಥಾನದ 35% ಆದಾಯಕ್ಕೆ ಒಳಪಟ್ಟು ಸ್ಕೇಲ್ ನೀಡಲು ನಿರ್ಧಾರಿಸಲಾಗಿದೆ. ಒಟ್ಟು 3,500 ಸಿಬ್ಬಂದಿ ವೇತನ ಪರಿಷ್ಕರಣೆಯಾಗಲಿದೆ ಎಂದು ತಿಳಿಸಿದರು. ಅದರಂತೆ ಎ ಗ್ರೂಪ್ ದೇವಸ್ಥಾನಗಳಲ್ಲಿನ ಸಿಬ್ಬಂದಿಯ ವೇತನ 11,600 ರಿಂದ 24,600 ರೂ.ವರೆಗೆ ಪರಿಷ್ಕರಣೆ ಆಗಲಿದ್ದರೆ, ಬಿ ಗ್ರೂಪ್ ದೇವಸ್ಥಾನಗಳಲ್ಲಿನ ಸಿಬ್ಬಂದಿ ವೇತನ 7,275 - 17,250 ರೂ. ವರೆಗೆ ಪರಿಷ್ಕರಣೆ ಆಗಲಿದೆ.
ಸಿಎಂ ಗ್ರಾಮೀಣ ಸುಮಾರ್ಗ ನೂತನ ಯೋಜನೆ ಜಾರಿ:
ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡುವ ಸಿಎಂ ಗ್ರಾಮೀಣ ಸುಮಾರ್ಗ ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ ನೀಡಿದೆ. ಹಳ್ಳಿ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವ ಯೋಜನೆ ಇದಾಗಿದೆ. ರಾಜ್ಯದಲ್ಲಿ 56,362 ಕಿ.ಮೀ. ಗ್ರಾಮೀಣ ರಸ್ತೆ ಇದೆ. ಈ ಪೈಕಿ 24,246 ಕಿ.ಮೀ. ಡಾಂಬರ್ ರಸ್ತೆ ಇದೆ. ಅದರಲ್ಲಿ ಹಾಳಾಗಿರುವ 20 ಸಾವಿರ ಕಿ.ಮೀ. ರಸ್ತೆ ಡಾಂಬರೀಕರಣ ಮತ್ತು ನಿರ್ವಹಣೆ ಯೋಜನೆ ಇದಾಗಿದೆ. 4 ಸಾವಿರ ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ವಿವರಿಸಿದರು.
ಐದು ವರ್ಷಕ್ಕೆ ರಸ್ತೆ ಪುನರ್ ನಿರ್ಮಾಣ ಹಾಗೂ ಸುಸ್ಥಿತಿಯಲ್ಲಿಡಲು 182 ಕೋಟಿ ರೂ. ಹಣ ತೆಗೆದಿರಿಸಲಾಗಿದೆ. ತಕ್ಷಣಕ್ಕೆ 600 ಕೋಟಿ ರೂ. ಬಿಡುಗಡೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ ಫೇಸ್ 3 ಘೋಷಣೆ ಆಗಿ ಸಾಕಷ್ಟು ಸಮಯ ಆಗಿದೆ. ಇನ್ನು1,500 ಕೋಟಿ ರೂ.ಹಣ ಬರಬೇಕು. ಇದುವರೆಗೂ ಕೇಂದ್ರದಿಂದ ಹಣ ಬಂದಿಲ್ಲ. ಹಣ ಬಂದರೆ ಮುಖ್ಯಮಂತ್ರಿ ಗ್ರಾಮೀಣ ಸುಮಾರ್ಗ ಯೋಜನೆಗೆ ಬಳಸಿಕೊಳ್ಳಬಹುದು ಎಂದು ಕೃಷ್ಣ ಭೈರೇಗೌಡ ತಿಳಿಸಿದರು.