ಬೆಂಗಳೂರು : ಕಾಂಗ್ರೆಸ್ ಹಾಗು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖ, ಯಾರಿಗೂ ಬಹುಮತ ಬರದಿದ್ದಲ್ಲಿ ಕುಮಾರಸ್ವಾಮಿ ಬಂದು ಕೂರುತ್ತಾರೆ. ಹಾಗಾಗಿ ಒಂದು ಬಾರಿ ಬಿಜೆಪಿಗೆ ಸಂಪೂರ್ಣ ಬಹುಮತದ ಅಧಿಕಾರ ನೀಡಿ, ಕರ್ನಾಟಕವನ್ನು ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಜಾತಿವಾದದಿಂದ ಮುಕ್ತ ಮಾಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ.
ಕರ್ನಾಟಕ ದಕ್ಷಿಣ ಭಾರತ ಬಿಜೆಪಿಯ ಹೆಬ್ಬಾಗಿಲು: ನಗರದ ಅರಮನೆ ಮೈದಾನದಲ್ಲಿ ಬೆಂಗಳೂರು ಮಹಾನಗರ ಬೂತ್ ವಿಜಯ ಸಂಕಲ್ಪ ಸಮಾವೇಶಕ್ಕೆ ಅಮಿತ್ ಶಾ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಜೆಡಿಎಸ್ ಕಾಂಗ್ರೆಸ್ ಚುನಾವಣೆ ಹತ್ತಿರ ಬರುತ್ತಾ ಇದ್ದಂತೆ ಒಟ್ಟಿಗೆ ಕೂರುತ್ತಾರೆ. ಅವರ ಆಡಳಿತ ನೋಡಿದ್ದೀರಿ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಯಶಸ್ವಿ ಆಗಿ ಸರ್ಕಾರ ನಡೆಸಿದ್ದಾರೆ. ದಕ್ಷಿಣದಲ್ಲಿ ಬಿಜೆಪಿಯನ್ನು ಬಲಿಷ್ಠ ಮಾಡಬೇಕಿದೆ. ದಕ್ಷಿಣ ಭಾರತಕ್ಕೆ ಕರ್ನಾಟಕ ಹೆಬ್ಬಾಗಿಲು. ಕರ್ನಾಟಕದ ಮೂಲಕ ದಕ್ಷಿಣ ಭಾರತಕ್ಕೆ ಬಿಜೆಪಿ ಪ್ರವೇಶಿಸುತ್ತಿದೆ ಎಂದು ಹೇಳಿದರು.
ಐದು ರಾಜ್ಯಗಳಲ್ಲಿ ಬಿಜೆಪಿಗೆ ಪೂರ್ಣ ಬಹುಮತ : ಮಂಡ್ಯದಲ್ಲಿ ಈ ರೀತಿ ರ್ಯಾಲಿ ನಾನು ನೋಡಿರಲಿಲ್ಲ. ದಕ್ಷಿಣದಲ್ಲಿ, ಮಂಡ್ಯ, ಮೈಸೂರು ಭಾಗದಲ್ಲಿ ನಿನ್ನೆ ನಡೆದ ರ್ಯಾಲಿ ಅದ್ಭುತವಾಗಿ ಇತ್ತು. ಇದಕ್ಕಾಗಿ ನಾನು ಕಟೀಲ್ ರನ್ನು ಅಭಿನಂದಿಸುತ್ತೇನೆ. ಐದು ರಾಜ್ಯಗಳಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದಿದೆ. ಗುಜರಾತ್ ನಲ್ಲಿ ಮೋದಿ ಎಲ್ಲಾ ದಾಖಲೆ ಪುಡಿ ಮಾಡಿದ್ದಾರೆ. ಕಾಂಗ್ರೆಸ್ ಗೆ ವಿಪಕ್ಷ ಸ್ಥಾನ ಕೂಡ ಸಿಗಲಿಲ್ಲ ಎಂದು ಕಾಂಗ್ರೆಸ್ನ್ನು ಅಪಹಾಸ್ಯ ಮಾಡಿದರು. ಇನ್ನು ಗುಜರಾತ್ , ಉತ್ತರಾಖಂಡ್, ಮಣಿಪುರ್, ಗೋವಾದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಪಡೆದಿದೆ. ಅಲ್ಲೆಲ್ಲಾ ಕಾಂಗ್ರೆಸ್ ಹೀನಾಯವಾಗಿ ಸೋತಿದೆ ಎಂದರು.
ಬಿಜೆಪಿ ಏಕಾಂಗಿಯಾಗಿಯೇ ಅಧಿಕಾರಕ್ಕೆ ಬರಲಿದೆ : ಬಿಜೆಪಿ ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ಮಾಜಿ ಪ್ರಧಾನಿ ದೇವೇಗೌಡ, ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸಿ ಏರುಧ್ವನಿಯಲ್ಲಿ ವಾಗ್ದಾಳಿ ನಡೆಸಿದ ಅಮಿತ್ ಶಾ, ಕಾಂಗ್ರೆಸ್ ತುಕ್ಡೇ ತುಕ್ಡೇ ಗ್ಯಾಂಗ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಜೆಡಿಎಸ್ ಚುನಾವಣೆ ಬಂದಾಗ ಬಿಜೆಪಿ ಜೊತೆ ಒಪ್ಪಂದದ ಬಗ್ಗೆ ಮಾತನಾಡುತ್ತದೆ. ಆದರೆ ಬಿಜೆಪಿ ಏಕಾಂಗಿಯೇ ಚುನಾವಣೆ ಎದುರಿಸಲಿದೆ. ಏಕಾಂಗಿಯಾಗಿಯೇ ಅಧಿಕಾರಕ್ಕೆ ಬರಲಿದೆ. ಯಾರ ಜೊತೆಯೂ ಯಾವ ಹೊಂದಾಣಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಇಲ್ಲಿ ಟಿಪ್ಪು ಸುಲ್ತಾನ್ ನ ಹೀರೊ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.ದೇವೇಗೌಡರ ವಿರುದ್ಧ ವಾಗ್ದಾಳಿ ಮುಂದುವರೆಸಿ, ನೀವು ಪ್ರಧಾನಿ ಆಗಿದ್ದೀರಿ. ಮುಖ್ಯಮಂತ್ರಿ ಆಗಿದ್ದೀರಿ ಆದರೂ ಏನು ಮಾಡಿಲ್ಲ. ಆದರೆ ನಾವು ಏನು ಮಾಡಿದ್ದೇವೆ ಎಂದು ನಮ್ಮ ಯುವ ಮೋರ್ಚಾ ಕಾರ್ಯಕರ್ತರು ನಿಮಗೆ ಹೇಳುತ್ತಾರೆ ಎಂದರು.
ದೇಶದ ರಕ್ಷಣೆ ಮೋದಿ ಮತ್ತು ಬಿಜೆಪಿಯಿಂದ ಮಾತ್ರ ಸಾಧ್ಯ : ಒಂದು ದೇಶದಲ್ಲಿ ಎರಡು ಸಂವಿಧಾನ ನಡೆಯಲು ಸಾಧ್ಯವಿಲ್ಲ. ಮೋದಿ ಸರ್ಕಾರ 2019ರ ಆಗಸ್ಟ್ 15 ರಂದು ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ 370ರ ಅಡಿಯ ವಿಶೇಷ ಸ್ಥಾನಮಾನ ರದ್ದು ಮಾಡಿತು. ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದು ಮಾಡಿದರೆ ರಕ್ತದ ಹೊಳೆ ಹರಿಯುತ್ತದೆ ಎಂದು ಮಮತಾ ಸಮಾತಾ ಎಲ್ಲಾ ಕಾವ್ ಕಾವ್ ಎನ್ನುತ್ತಿದ್ದರು. ಆದರೆ ಈಗ ಕಾಶ್ಮೀರ ಬಂದು ನೋಡಿ. ಬಿಜೆಪಿ ಯಾವತ್ತು ವೋಟ್ ಬ್ಯಾಂಕ್ ರಾಜಕೀಯ ಮಾಡಲ್ಲ. ಬಿಜೆಪಿಗೆ ದೇಶದ ರಕ್ಷಣೆ ಮುಖ್ಯ, ದೇಶದ ರಕ್ಷಣೆ ಮೋದಿ ಮತ್ತು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.
ಬಿಜೆಪಿಗೆ ವೋಟ್ ಬ್ಯಾಂಕ್ ಭಯವಿಲ್ಲ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ ಅವರ ಹೆಸರು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ ಅಮಿತ್ ಶಾ, ಇವರುಗಳಿಂದ ಮತ್ತು ಪಿಎಫ್ ಐನಿಂದ ದೇಶ ರಕ್ಷಣೆ ಸಾಧ್ಯವೇ..!?. ಇವರು ದೇಶವನ್ನು ಸುರಕ್ಷಿತವಾಗಿ ಇಡ್ತಾರೆ ಅಂತಾ ನಿರೀಕ್ಷೆ ಸಾಧ್ಯವೇ.!? ಇವರು ವೋಟ್ ಬ್ಯಾಂಕ್ ಗೆ ಹೆದರುತ್ತಿದ್ದಾರೆ. ಆದರೆ ಬಿಜೆಪಿಗೆ ಆ ವೋಟ್ ಬ್ಯಾಂಕ್ ಭಯ ಇಲ್ಲ, ದೇಶದ ಸುರಕ್ಷತೆಯೇ ನಮ್ಮ ಗುರಿ ಎಂದರು.
ಬೂತ್ ಬಲಪಡಿಸಿ ಎಂದು ಕಾರ್ಯಕರ್ತರಿಗೆ ಶಾ ಕರೆ : ಸಿಎಂ ಬೊಮ್ಮಾಯಿ ಆಳ್ವಿಕ ಹೊಗಳಿದ ಅಮಿತ್ ಶಾ, ಬೆಂಗಳೂರಲ್ಲಿ 20ಕ್ಕೂ ಹೆಚ್ಚು ಸೀಟ್ ಗೆಲ್ಲಬೇಕು. ಆ ಮೂಲಕ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚಿಸಬೇಕು. ಬೂತ್ ಗೆದ್ದರೆ ಕ್ಷೇತ್ರ ಗೆದ್ದಂತೆ. ಕ್ಷೇತ್ರ ಗೆದ್ದರೆ ಅಧಿಕಾರಕ್ಕೆ ಬಂದಂತೆ, ಅದಕ್ಕಾಗಿ ಬೂತ್ ಬಲಪಡಿಸಿ ಎಂದು ಕರೆ ನೀಡಿದರು.
ಭಾರತ್ ಮಾತಾಕೀ ಜೈ ಎಂದಾಗ ಜೋರಾಗಿ ಕೂಗದ ಕಾರ್ಯಕರ್ತರ ನಡೆಗೆ ಅತೃಪ್ತರಾದ ಶಾ, ಬೆಂಗಳೂರಿನ ಕಾರ್ಯಕರ್ತರೇ ನಿಮಗೆ ಏನಾಗಿದೆ.? ಎಲ್ಲಿ ಹೋಯ್ತು ನಿಮ್ಮ ಧ್ವನಿ..! ನಿಮ್ಮ ಧ್ವನಿ ಎಲ್ಲಿಗೆ ಕೇಳಿಸಬೇಕು 20ಕ್ಕೂ ಹೆಚ್ಚು ಸೀಟ್ ಗೆಲ್ಲುವಂತೆ ಮಾಡಬೇಕು ಎಂದರು. ಆ ಬಳಿಕ ಜೋರಾಗಿ ಭಾರತ್ ಮಾತಾಕೀ ಜೈ ಎಂದು ಕಾರ್ಯಕರ್ತರು ಕೂಗಿದರು.
ಇದನ್ನೂ ಓದಿ : ಮಹಾನಗರಗಳ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚಿಸಲು ಅಧ್ಯಯನ, ವಸತಿ ಸೌಕರ್ಯ ಅಭಿವೃದ್ಧಿ - ಅಮಿತ್ ಶಾ