ಬೆಂಗಳೂರು: ಹೈ-ಫೈ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿಕೊಂಡು ತಮ್ಮ ಕಂಪನಿಗೆ ಹಣ ಹೂಡಿಕೆ ಮಾಡಿಸಿ ಲಕ್ಷ ಲಕ್ಷ ರೂಪಾಯಿ ವಂಚಿಸಿರುವ ದಂಪತಿಯನ್ನು ಬಂಧಿಸುವಲ್ಲಿ ಪುಟ್ಟೇನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಮೀಜಾ ಹಾಗೂ ಮುರಳಿ ಕೃಷ್ಣನ್ ಬಂಧಿತ ದಂಪತಿ. ಬೆಂಗಳೂರಿನ ಎಸ್ಜಿಎಸ್ ಲೇಔಟ್ನ ವಿಶ್ವನಾಥಮ್ ಪೆಡ್ಡಿ ಎಂಬುವವರು ಮೈಂಡ್ ಟ್ರಿ ಕಂಪನಿಯಲ್ಲಿ ಗ್ಲೋಬಲ್ ಆಪರೇಷನ್ಸ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಕೈತುಂಬಾ ಸಂಬಳ ಪಡೆಯುತ್ತಿದ್ದರು. ಆದ್ರೆ ಹಣವನ್ನು ಎಲ್ಲಾದ್ರೂ ಇನ್ವೆಸ್ಟ್ ಮಾಡಬೇಕಲ್ವಾ ಎಂದುಕೊಂಡಾಗ ಕಣ್ಣಿಗೆ ಬಿದ್ದಿದ್ದು ಪೇಪರ್ವೊಂದರ ಜಾಹೀರಾತು. ಹ್ಯಾಪಿ ಕೌ ಆರ್ಗಾನಿಕ್ಸ್ ಎಂಬ ಕಂಪನಿಯನ್ನು ಆರೋಪಿಗಳಾದ ಸುಮೀಜಾ ಮತ್ತು ಮುರಳಿ ಕೃಷ್ಣನ್ ನಡೆಸುತ್ತಿದ್ದು, ಕಂಪನಿಯ ಸೂಪರ್ ಮಾರ್ಕೆಟ್ ಬಗ್ಗೆ ಹಲವೆಡೆ ಜಾಹೀರಾತು ಕೊಟ್ಟಿದ್ದರು. ಸೂಪರ್ ಮಾರ್ಕೆಟ್ಗೆ ಹಣ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭಾಂಶ ಕೊಡುವುದಾಗಿ ಜಾಹೀರಾತು ಕೊಟ್ಟು ಬೆಂಗಳೂರಿನ ಪುಟ್ಟೇನಹಳ್ಳಿ, ಜೆಪಿ ನಗರದಲ್ಲಿ ಸೂಪರ್ ಮಾರ್ಕೆಟ್ ಓಪನ್ ಮಾಡಿದ್ದರಂತೆ.

ಇದನ್ನು ನೋಡಿದ ಪುಟ್ಟೇನಹಳ್ಳಿ ನಿವಾಸಿ ವಿಶ್ವನಾಥಮ್ ಪೆಡ್ಡಿ ಎಂಬುವರು ಆ ಕಂಪನಿಗೆ ಹಣ ಹೂಡಿಕೆ ಮಾಡಲು ಪ್ಲ್ಯಾನ್ ಮಾಡಿದ್ರು. ಮೊದಲು 50 ಲಕ್ಷ ರೂ. ಇನ್ವೆಷ್ಟ್ ಮಾಡಿದ್ದ ವಿಶ್ವನಾಥಮ್ ಅವರಿಗೆ ನಾಲ್ಕು ತಿಂಗಳು ಸರಿಯಾಗಿಯೇ ಲಾಭಾಂಶ ಬರುತ್ತಿತ್ತು. ಆದ್ರೆ ಅದಾದ ಬಳಿಕ ಲಾಭಾಂಶ ನಿಂತು ಹೋಗಿತ್ತು. ಈ ಬಗ್ಗೆ ಹೋಗಿ ಪ್ರಶ್ನಿಸಿದಾಗ ಕಂಪನಿ ಲಾಸ್ನಲ್ಲಿದೆ. ಹಾಗಾಗಿ ಮತ್ತೆ 50 ಲಕ್ಷ ರೂ. ಹಣ ಹೂಡಿಕೆ ಮಾಡಿ ಅಂದಿದ್ದಾರಂತೆ ಈ ದಂಪತಿ. ಅದರಂತೆ ಬ್ಯಾಂಕ್ನಿಂದ ಲೋನ್ ಪಡೆದು ಮತ್ತೆ 30 ಲಕ್ಷ ರೂ. ಹಣವನ್ನು ಪಾವತಿ ಮಾಡಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಸೂಪರ್ ಮಾರ್ಕೆಟ್ ಕ್ಲೋಸ್ ಆಗಿದೆ.
ಆರೋಪಿಗಳನ್ನು ಹೋಗಿ ಕೇಳಿದ್ರೆ ಯಾವುದೇ ಪ್ರಯೋಜನ ಆಗಲಿಲ್ಲವಂತೆ. ಆದ್ರೆ ಈ ಅರೋಪಿ ದಂಪತಿ ಮಾತ್ರ ಹಣ ತಿಂದು ರಾಯಲ್ ಆಗಿ ಲೈಫ್ ಲೀಡ್ ಮಾಡುತ್ತಿದ್ದರಂತೆ. ಆರ್ಟಿ ನಗರದ ಹೈ-ಫೈ ಅಪಾರ್ಟ್ಮೆಂಟ್ವೊಂದಲ್ಲಿ ದಂಪತಿ ವಾಸವಾಗಿದ್ರು. ಮನೆ ಅಡ್ರೆಸ್ ಗೊತ್ತಾದ ಬಳಿಕ ದಂಪತಿ ಮನೆಗೆ ವಿಶ್ವನಾಥಮ್ ಆಗಾಗ ಹೋಗಿ ಹಣ ಕೊಡುವಂತೆ ಕೇಳಿದ್ದಾರೆ. ಈ ವೇಳೆ ಆರೋಪಿಗಳು ಜೀವ ಬೆದರಿಕೆ ಹಾಕಿ ನಂತರ ಮನೆ ಖಾಲಿ ಮಾಡಿ ಪರಾರಿ ಆಗಿದ್ದಾರೆ ಎನ್ನಲಾಗಿದೆ.
ಬಳಿಕ ವಿಶ್ವನಾಥಮ್ ಆರೋಪಿಗಳ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವಿಶೇಷ ತಂಡ ರಚನೆ ಮಾಡಿ ಆರೋಪಿಗಳನ್ನು ಕೇರಳದ ತ್ರಿವೇಂಡ್ರಮ್ನಲ್ಲಿ ಬಂಧಿಸಿದ್ದಾರೆ. ಈ ಜೋಡಿ ಹಲವರಿಗೆ ಇದೇ ರೀತಿ ವಂಚಿಸಿರುವುದು ಬೆಳಕಿಗೆ ಬಂದಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.