ಬೆಂಗಳೂರು: "ನಾನೇನು ರಾಜಕೀಯ ಸನ್ಯಾಸಿಯಲ್ಲ, ಲೋಕಸಭಾ ಚುನಾವಣೆ ಬಳಿಕ ನಾನು ನನ್ನ ವೈಯಕ್ತಿಕ ರಾಜಕಾರಣ ಮಾಡುತ್ತೇನೆ. ಚುನಾವಣೆ ಎನ್ನುವುದು ಇಬ್ಬರ ನಡುವಿನ ಚೆಸ್ ಗೇಮ್ ಅಲ್ಲ, ತಂಡವಾಗಿ ಎಲ್ಲರೂ ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಿಗಲಿದೆ. ನಾಯಕ ಸಮನ್ವಯತೆ ಮೂಡಿಸುವ ಕೆಲಸ ಮಾಡಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಬೇಕು" ಎಂದು ಸಿ ಟಿ ರವಿ ಹೇಳಿದರು.
ನಗರದ ಶಿವಾನಂದ ವೃತ್ತದ ಸಮೀಪದಲ್ಲಿನ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ ಆಗಿರಲಿಲ್ಲ, ಹಾಗಾಗಿ ನನಗೆ ಯಾವುದೇ ಅಸಮಾಧಾನ ಇಲ್ಲ. ನಮ್ಮ ಗುರಿ 2024ಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರ ತರಬೇಕು ಎನ್ನುವುದಾಗಿದೆ. ಮೂರನೇ ಬಾರಿ ಮೋದಿ ಪಿಎಂ ಆಗಬೇಕಾಗಿರುವುದು ದೇಶಕ್ಕಾಗಿ. ಮೋದಿ ನೇತೃತ್ವ, ಬಿಜೆಪಿ ವಿಚಾರಧಾರೆ ಕಾರಣದಿಂದ ಭಾರತ ವಿಶ್ವಗುರುವಾಗಲಿದೆ. ಅದಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಆ ಕಡೆಗೆ ಮಾತ್ರ ನಮ್ಮ ಗಮನವಿರಲಿದೆ" ಎಂದರು.
"ನಾವೇನು ಸನ್ಯಾಸಿಗಳಲ್ಲ, ಈಗೇನಿದ್ದರೂ ಮೋದಿ ಸರ್ಕಾರ ಅಧಿಕಾರಕ್ಕೆ ತರುವುದಷ್ಟೆ ನನ್ನ ಗುರಿ, ಅದಕ್ಕಷ್ಟೇ ಸಮಯ ನೀಡಲಿದ್ದೇನೆ. ನಮ್ಮ ವೈಯಕ್ತಿಕ ರಾಜಕಾರಣ 2024ರ ನಂತರವಾಗಲಿದೆ, ಈಗೇನಿದ್ದರೂ ರಾಷ್ಟ್ರ ಹಿತದ ರಾಜಕಾರಣ, ಮೋದಿ ಸರ್ಕಾರ ಮತ್ತೆ ತರಬೇಕು ಎನ್ನುವುದಷ್ಟೇ ಆಗಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹ ಯೋಗ್ಯತೆ ಬಹಳಷ್ಟು ಜನರಿಗಿದೆ. ಆದರೆ ಯಾವ ಸಂದರ್ಭಕ್ಕೆ ಯಾರು ಸೂಕ್ತ ಎಂದು ಹೈಕಮಾಂಡ್ ನಿರ್ಧರಿಸಲಿದೆ. ಈಗ ಅದನ್ನೇ ಹೈಕಮಾಂಡ್ ಮಾಡಿದೆ" ಎಂದು ಹೇಳಿದರು.
"ನೂತನವಾಗಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ ವೈ ವಿಜಯೇಂದ್ರ ಅವರಿಗೆ ಈಗಾಗಲೇ ಅಭಿನಂದನೆ ಸಲ್ಲಿಸಿದ್ದೇನೆ. ರಾಜ್ಯಾಧ್ಯಕ್ಷ ಸ್ಥಾನ ಎನ್ನುವುದು ಅಧಿಕಾರ ಅಲ್ಲ ಜವಾಬ್ದಾರಿ, ಜವಾಬ್ದಾರಿ ಕೇಳಿ ಪಡೆಯುವ ಹುದ್ದೆ ಅಲ್ಲ. ನಾನು ಯಾವುದೇ ಹುದ್ದೆಯ ಆಕಾಂಕ್ಷಿ ಅಲ್ಲ ಎಂದು ಹಿಂದೆಯೇ ಹೇಳಿದ್ದೆ, ಎರಡೂವರೆ ದಶಕದಿಂದ ಯಾವ ಹುದ್ದೆಯನ್ನೂ ಕೇಳಿ ಪಡೆದಿಲ್ಲ. ಬೂತ್ ಮಟ್ಟದಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವರೆಗೂ ನನಗೆ ಪಕ್ಷ ಜವಾಬ್ದಾರಿಯನ್ನು ಕೇಳದೇ ಕೊಟ್ಟಿದೆ. ಈಗ ವಿಜಯೇಂದ್ರಗೆ ಜವಾಬ್ದಾರಿ ಕೊಟ್ಟಿದೆ, ವೈಚಾರಿಕವಾಗಿ ಸಂಘಟನೆ ವಿಸ್ತರಣೆ, ಲೋಕಸಭೆ ಸೇರಿ ಮುಂಬರಲಿರುವ ಎಲ್ಲಾ ಚುನಾವಣೆ ಗೆಲ್ಲಬೇಕು. ಸಂಘಟನೆ ಬೆಳೆಸಬೇಕು, ಪಕ್ಷ ಬೆಳೆಸುವ ಎಲ್ಲ ಶಕ್ತಿ ಅವರಿಗೆ ಕೊಡಲಿ" ಎಂದರು.
ಜಾತಿಯಾಧಾರಿತ ಅವಕಾಶ ಸರಿಯಲ್ಲ: ಪ್ರತಿಪಕ್ಷ ನಾಯಕರ ಸ್ಥಾನ ಒಕ್ಕಲಿಗರಿಗೆ ನೀಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, "ನಮ್ಮ ಪಕ್ಷ ಸಿದ್ಧಾಂತ ಆಧಾರದಲ್ಲಿ ನಡೆಯಲಿದೆ. ಸಮರ್ಥವಾಗಿ ಕಾಂಗ್ರೆಸ್ ಅನ್ನು ಸದನದಲ್ಲಿ ಕಟ್ಟಿ ಹಾಕುವ ಅಭ್ಯರ್ಥಿ ಕೊಡಿ ಎಂದಿದ್ದೇವೆ. ಜಾತಿ ಆಧಾರ ತಾತ್ಕಾಲಿಕವಾಗಿ ಗೆಲುವು ತರಲಿದೆ. ಆದರೆ ಸಿದ್ಧಾಂತ ಮುಖ್ಯ, ಜಾತಿ ಆಧಾರಿತ ಆಯ್ಕೆ ನಾನು ಒಪ್ಪಲ್ಲ. ಕಾಂಗ್ರೆಸ್ ಅನ್ನು ಸದನದಲ್ಲಿ ಕಟ್ಟಿ ಹಾಕುವ ಯೋಗ್ಯ ವ್ಯಕ್ತಿ ಕೊಡಲಿ ಎನ್ನುವುದು ನನ್ನ ಅಭಿಪ್ರಾಯ. ಬಿಜೆಪಿ ಕೇವಲ ಜಾತಿಯನ್ನೇ ಮಾನದಂಡ ಮಾಡಿಕೊಳ್ಳಲ್ಲ, ಜಾತಿ ರಣತಂತ್ರದ ಭಾಗವಾಗಬೇಕೇ ಹೊರತು ಅದೇ ಸಿದ್ಧಾಂತ ಆಗಬಾರದು" ಎಂದರು.
ಇದನ್ನೂ ಓದಿ: ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕವನ್ನ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ: ಅಶ್ವತ್ಥ ನಾರಾಯಣ್