ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಅವರ ಸ್ವಗೃಹ, ಕಚೇರಿ ಮೇಲೆ ಈಗಾಗಲೇ ಐಟಿ ದಾಳಿ ನಡೆಸಿದ್ದು, ಎರಡು ದಿನಗಳಿಂದ ಅವರ ಒಡೆತನದ ವಿದ್ಯಾಸಂಸ್ಥೆಗಳ ಮೇಲೂ ಐಟಿ ದಾಳಿ ನಡೆಯುತ್ತಿದೆ.
ಸದ್ಯ ಮನೆಯ ಮೇಲಿನ ದಾಳಿ ಮುಕ್ತಾಯವಾಗಿದ್ದು, ಅಕ್ಟೋಬರ್ 11ರಂದು ಐಟಿ ಇಲಾಖೆ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ, ಹವಾಲಾ ಹಣದ ಬಗ್ಗೆ ಉಲ್ಲೇಖ ಮಾಡಿದೆ. ಹೀಗಾಗಿ ಹವಾಲಾ ವ್ಯವಹಾರ ಕಂಡು ಬಂದ ಹಿನ್ನಲೆ ಇ.ಡಿ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಪರಮೇಶ್ವರ್ ಅವರು ಆದಾಯ ತೆರಿಗೆ ಇಲಾಖೆ ವಿಚಾರಣೆಗೆ ಮಾತ್ರವಲ್ಲದೇ, ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿಚಾರಣೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ, ಪಿಎಂಎಲ್ಎ ಕಾಯ್ದೆಯ ಅಡಿಯಲ್ಲಿ ಹವಾಲಾ ಹಣದ ತನಿಖೆಯನ್ನ ಇ.ಡಿ ಕೈಗೆತ್ತಿಕೊಳ್ಳಲಿದೆ. ಹೀಗಾಗಿ ಪರಮೇಶ್ವರ್ಗೆ ಇ.ಡಿ ಸಂಕಷ್ಟ ಖಚಿತ ಎಂದು ಉನ್ನತ ಮೂಲಗಳು ತಿಳಿಸಿವೆ.
ಒಂದು ವೇಳೆ ಪಿಎಂಎಲ್ಎ ಕಾಯ್ದೆಯ ಅಡಿಯಲ್ಲಿ ಇ.ಡಿ ಪ್ರಕರಣ ದಾಖಲಿಸಿ ಪ್ರಕರಣ ಕೈಗೆತ್ತಿಕೊಂಡರೆ ಪರಮೇಶ್ವರ್ಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.
ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನೆ, ಕಚೇರಿ ಮೇಲೆ ಮೊದಲು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ನಂತರ, ಪ್ರಕರಣವನ್ನು ಇಡಿಗೆ ವರ್ಗಾವಣೆ ಮಾಡಿತ್ತು. ಸದ್ಯ ಪರಮೇಶ್ವರ್ ಪ್ರಕರಣವನ್ನ ಕೂಡ ಇಡಿಗೆ ಆದಾಯ ತೆರಿಗೆ ವರ್ಗಾವಣೆ ಮಾಡುವ ಎಲ್ಲಾ ಸಾಧ್ಯತೆಗಳಿವೆ.