ಬೆಂಗಳೂರು : ಸರ್ಕಾರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಈ ಕುರಿತು ರೈತ ಮುಖಂಡರ ಜೊತೆ ಮಾತುಕತೆ ನಡೆಸಿ ಅಭಿಪ್ರಾಯ ಪಡೆದಿದ್ದೇನೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶಿವಾನಂದ ವೃತ್ತದ ಬಳಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ರೈತ ಮುಖಂಡರ ಜೊತೆ ಇಂದು ಸಭೆ ನಡೆಸಿದ್ದೇನೆ. ಎಲ್ಲರೂ ಕಾಯ್ದೆ ವಿರೋಧಿಸಿದ್ದಾರೆ. ಇದು ರೈತರನ್ನು ಬೀದಿ ಪಾಲು ಮಾಡುವ ಕಾಯ್ದೆಯಾಗಿದೆ. ಗ್ರಾಮೀಣ ಪ್ರದೇಶದ ಆರ್ಥಿಕತೆ ಬುಡಮೇಲು ಮಾಡುತ್ತದೆ. ಆಹಾರ ಸ್ವಾವಲಂಬನೆಗೆ ಏಟು ನೀಡುತ್ತದೆ. ಹಳ್ಳಿ ಮಟ್ಟದಲ್ಲಿ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ನಾವು ಕೂಡ ಪಕ್ಷದ ವತಿಯಿಂದ ಹೋರಾಟ ಮಾಡ್ತೇವೆ. ಪಕ್ಷದ ಇತರೆ ಹಿರಿಯ ನಾಯಕರ ಜೊತೆ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.
ರೈತರಿಗೆ ಮಾರಕವಾದ ತಿದ್ದುಪಡಿ : ವಿದ್ಯುತ್ ಕಾಯ್ದೆಗೂ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ಸರ್ಕಾರ ರೈತರಿಗೆ ಮಾರಕವಾದ ತಿದ್ದುಪಡಿ ಮಾಡುತ್ತಿದೆ. ತಿದ್ದುಪಡಿ ಕಾಯ್ದೆ ಜಾರಿಯಿಂದ ಒಟ್ಟು 1.70 ಲಕ್ಷ ಎಕರೆ ಪ್ರದೇಶ 13 ಸಾವಿರ ಭೂ ವ್ಯಾಜ್ಯಗಳು ರದ್ದಾಗಲಿವೆ. ಈ ಎಲ್ಲಾ ಭೂಮಿ ಸರ್ಕಾರಕ್ಕೆ ಬರಲಿವೆ. ಸರ್ಕಾರ ಭೂಮಿಯನ್ನು ಮುಟ್ಟುಗೋಲು ಹಾಕಿ ಶ್ರೀಮಂತರು, ರಿಯಲ್ ಎಸ್ಟೇಟ್ನವರಿಗೆ ಮಾರುವುದು ಇದರ ಹಿಂದಿರುವ ಹುನ್ನಾರ. ರಿಯಲ್ ಎಸ್ಟೇಟ್ನವರ ಒತ್ತಡಕ್ಕೆ ಮಣಿದು ಸರ್ಕಾರ ಈ ರೀತಿ ಮಾಡುತ್ತಿದೆ. ಈ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಕಂದಾಯ ಸಚಿವ ಆರ್. ಅಶೋಕ್ ವಿರುದ್ಧ ಕಿಡಿ : ಆರ್.ಅಶೋಕ್ ರಾಜಕಾರಣಕ್ಕೆ ಬಂದಿದ್ದು ಯಾವಾಗ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಬಗ್ಗೆ ಅವರಿಗೆ ಏನು ಗೊತ್ತಿದೆ. ಅವರು ಹೊಲ ಉತ್ತಿದ್ದಾರಾ, ಇಲ್ವಾ ನಮಗೆ ಗೊತ್ತಿಲ್ಲ. ಮೇಟಿ ಹಾಲು ಕುಡಿಸ್ತೀವಿ ಅಂತಾ ನಮ್ಮ ಕಡೆ ಗಾದೆಯಿದೆ. ಹಾಗೆ ಮಾಡಿದ್ರೆ ಕೈಯಲ್ಲಿ ಬೊಬ್ಬೆ ಬರುತ್ತೆ. ಅದು ಅಶೋಕ್ ಅವರಿಗೆ ಗೊತ್ತಿದೆಯೇ.. ನನಗೆ ಇವತ್ತಿಗೂ ನೇಗಿಲು, ಕುಂಟೆ ಕಟ್ಟೋದು ಬರುತ್ತೆ. ಹಲುವೆ ಹೊಡೆಯೋದು ಗೊತ್ತಿದೆ, ಭೂಮಿ ಮಟ್ಟ ಮಾಡುವುದು ಬರುತ್ತೆ. ಅಶೋಕ್ಗೆ ಇದರ ಬಗ್ಗೆ ಗೊತ್ತಿದೆಯೇ.. ಸುಮ್ಮನೆ ಕಂದಾಯ ಸಚಿವರಾದ್ರೆ ಎಲ್ಲವೂ ಗೊತ್ತಾಗಲ್ಲ. ಕಂದಾಯ ಸಚಿವರಾಗಿರೋದ್ರಿಂದ ಎಲ್ಲವನ್ನು ತಿಳಿಯಬೇಕು. ರೈತರ, ಹೊಸ ಜಮೀನಿನ ಬಗ್ಗೆ ತಿಳಿದುಕೊಳ್ಳಬೇಕು. ಅವರು ತಿಳಿದುಕೊಂಡಿದ್ದಾರೋ ಇಲ್ವೋ ಗೊತ್ತಿಲ್ಲ ಎಂದರು.
ಮೆಡಿಕಲ್ ಕಿಟ್ ಅವ್ಯವಹಾರ ಬಹಿರಂಗ ಮಾಡ್ತೇನೆ : ಮೆಡಿಕಲ್ ಕಿಟ್ ಅವ್ಯವಹಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯನವರು, ಶ್ರೀರಾಮುಲು ಸುಳ್ಳು ಹೇಳಿದ್ದಾರೆ. ಇದನ್ನು ಮಾಧ್ಯಮಗಳು ಚರ್ಚೆ ಮಾಡಿ ಸುದ್ದಿ ಮಾಡಬೇಕು. ನಾಳೆ ಸುದ್ದಿಗೋಷ್ಠಿ ಮಾಡಿ ಈ ವಿಷಯವನ್ನು ಬಹಿರಂಗ ಮಾಡ್ತೇನೆ. ಸರ್ಕಾರಕ್ಕೆ ಮೂರು ಪತ್ರ ಬರೆದಿದ್ದೇನೆ. ನಿನ್ನೆ ಮುಖ್ಯ ಕಾರ್ಯದರ್ಶಿ ಜೊತೆನೂ ಮಾತನಾಡಿದ್ದೇನೆ. ಸಿಎಂ 24 ಗಂಟೆಯೊಳಗೆ ಮಾಹಿತಿ ಕೊಡ್ತೇನೆ ಅಂದಿದ್ರು. ಈವರೆಗೆ ಏನು ಉತ್ತರ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.