ಬೆಂಗಳೂರು : ಎಮ್ಮೆಗಳನ್ನ ಮಾರಾಟ ಮಾಡಿ ಬಂದ ಹಣವನ್ನ ವಸೂಲಿ ಮಾಡಿಕೊಂಡು ಆಟೋದಲ್ಲಿ ಬರುತ್ತಿದ್ದಾಗ ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಚಾಲಕನ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ 16.60 ಲಕ್ಷ ರೂ. ಕಸಿದುಕೊಂಡು ಪರಾರಿಯಾಗಿರುವ ಘಟನೆ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಳ್ಳಾರಿ ಮೂಲದ 65 ವರ್ಷದ ಮುನೀರ್ ಹಣ ಕಳೆದುಕೊಂಡವರು. ಇವರು ನೀಡಿದ ದೂರಿನ ಮೇರೆಗೆ ಭಾರತಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳ್ಳಾರಿ, ಗಂಗಾವತಿ ಸೇರಿದಂತೆ ಮೊದಲಾದ ಕಡೆಗಳಲ್ಲಿ ನಗರಕ್ಕೆ ಎಮ್ಮೆ ಸಾಗಾಟ ಮಾಡಿದ ಹಣ ವಸೂಲಿ ಮಾಡುವ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಮುನೀರ್ ಎಂದಿನಂತೆ ಜ.7ರಂದು ನಗರದ ಟ್ಯಾನರಿ ರಸ್ತೆಗೆ ಬಂದಿದ್ದಾರೆ.
ಖರೀದಿದಾರರಿಂದ 9.90 ಲಕ್ಷ ರೂ. ಪಡೆದಿದ್ದರು. ಜತೆಗೆ ಮುನೀರ್ ಪರಿಚಿತರಾದ ಯೂಸುಫ್ ಎಂಬುವರು ಗಂಗಾವತಿಯಲ್ಲಿರುವ ತನ್ನ ತಂದೆಗೆ ನೀಡಲು 6.70 ಲಕ್ಷ ರೂ. ಇವರ ಕೈಗೆ ಕೊಟ್ಟಿದ್ದರು. ಒಟ್ಟು 16.60 ಲಕ್ಷ ರೂಗಳನ್ನು ಬ್ಯಾಗ್‌ವೊಂದರಲ್ಲಿ ಹಾಕಿ ಸಹೋದರ ಲತೀಫ್ ಆಟೋದಲ್ಲಿ ಮೆಜೆಸ್ಟಿಕ್ ಕಡೆ ಬರುತ್ತಿದ್ದರು.
ಓದಿ: 'ಇನ್ನೊಮ್ಮೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಬಂದರೆ ನಾಲಿಗೆ ಕಿತ್ತು ಹಾಕುತ್ತೇವೆ'
ಮಾರ್ಗ ಮಧ್ಯೆ ಮುನೀರ್ ಮಾವ ಹಬೀಬ್ ಎಂಬುವರು ಸಿಕ್ಕಿದ್ದರು. ಇವರು ಶಿವಾಜಿ ಚೌಕ್‌ಗೆ ಡ್ರಾಪ್ ಕೊಡುವಂತೆ ಮನವಿ ಮಾಡಿದ್ದರು. ರಾತ್ರಿ 12 ಗಂಟೆಗೆ ಅವರನ್ನು ಮನೆಗೆ ಬಿಟ್ಟು ಆಟೋದಲ್ಲಿ ಮೆಜೆಸ್ಟಿಕ್‌ಗೆ ಹಿಂತಿರುಗುತ್ತಿದ್ದಾಗ ಕಾಕ್‌ಬರ್ನ್ ರಸ್ತೆಯಲ್ಲಿ 2 ದ್ವಿಚಕ್ರವಾಹನದಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಆಟೋವನ್ನು ಅಡ್ಡಗಟ್ಟಿ ಚಾಲಕ ಲತೀಫ್ ಮುಖಕ್ಕೆ ಪೆಪ್ಪರ್ ಸ್ಟ್ರೇ ಮಾಡಿ ನಾಲ್ವರ ಪೈಕಿ ಓರ್ವ ಆರೋಪಿ ಮುನೀರ್ ಕೈನಿಂದ 16.60 ಲಕ್ಷ ರೂಪಾಯಿಯಿದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.