ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ತೀವ್ರವಾಗಿ ಹೆಚ್ಚುತ್ತಿದ್ದು, ಮತ್ತೆ ಲಾಕ್‌ಡೌನ್ ಆಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.
ಈಗಾಗಲೇ ಕೆಲ ನಗರಗಳಲ್ಲಿ ರಾತ್ರಿ ಸಮಯದಲ್ಲಿ ಕೊರೊನಾ ಕರ್ಫ್ಯೂ ಜಾರಿಯಾಗಿದ್ದು, ಇದಾದ ಬಳಿಕ ಲಾಕ್‌ಡೌನ್ ಹೇರಲಾಗುತ್ತದೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ. ಆದರೆ ಮೊದಲ ಲಾಕ್ಡೌನ್ನಿಂದ ತತ್ತರಿಸಿದ್ದ ರಾಜ್ಯದ ಆರ್ಥಿಕ ಪರಿಸ್ಥಿತಿ, ಮತ್ತೊಮ್ಮೆ ಲಾಕ್‌ಡೌನ್ ಘೋಷಿಸಿದರೆ ಭಾರೀ ಸಂಕಷ್ಟಕ್ಕೆ ಸಿಲುಕುವುದಂತು ಖಂಡಿತಾ.
ಮೊದಲ ಲಾಕ್ಡೌನ್ಗೆ ಮಂಡಿಯೂರಿದ್ದ ಆರ್ಥಿಕತೆ: ಕಳೆದ ವರ್ಷ ಕೋವಿಡ್ ಮೊದಲ ಅಲೆ ವೇಳೆ ರಾಷ್ಟ್ರವ್ಯಾಪಿ ಹೇರಲಾಗಿದ್ದ ಲಾಕ್‌ಡೌನ್ ಹೊಡೆತಕ್ಕೆ ಸಿಲುಕಿದ್ದ ರಾಜ್ಯದ ಆರ್ಥಿಕತೆ ಇನ್ನೂ ಚೇತರಿಸಿಕೊಂಡಿಲ್ಲ. ಲಾಕ್‌ಡೌನ್ ಪರಿಣಾಮ ರಾಜ್ಯ ಸರ್ಕಾರದ ಪ್ರಮುಖ ಆದಾಯ ಮೂಲಗಳೇ ಸೊರಗಿ ಹೋಗಿದ್ದು, ಮಾರ್ಚ್ ಅಂತ್ಯಕ್ಕೆ ನಿರೀಕ್ಷೆಗಿಂತ ಸುಮಾರು 20,000 ಕೋಟಿ ರೂ. ಆದಾಯ ಕೊರತೆ ಬಂದಿದೆ. ಅಂದರೆ ವಿವಿಧ ತೆರಿಗೆ ಮೂಲದಿಂದ ಶೇ. 5ರಿಂದ 22ರವರೆಗೆ ಆದಾಯ ಕೊರತೆ ಎದುರಾಗಿದೆ. ಈ ಪ್ರತಿಕೂಲ ವಾತವಾರಣ ಮುಂದಿನ ನಾಲ್ಕೈದು ತಿಂಗಳು ಇರಲಿದೆ ಎಂದು ಆರ್ಥಿಕ ಅಧಿಕಾರಿಗಳು ತಿಳಿಸಿದ್ದಾರೆ.
2019-20ನೇ ಸಾಲಿನಲ್ಲಿ ಬರೋಬ್ಬರಿ 1,02,363 ಕೋಟಿ ರೂ. ತೆರಿಗೆ ರೂಪದಲ್ಲಿ ಸರ್ಕಾರದ ಬೊಕ್ಕಸ ಸೇರಿತ್ತು. ಅದರೆ, ಕೊರೊನಾ ಹೊಡೆತದಿಂದ 2020-21ನೇ ಸಾಲಿನಲ್ಲಿ ತೆರಿಗೆ ಸಂಗ್ರಹ ಆಗಿರುವುದು 96,558 ಕೋಟಿ ರೂ ಮಾತ್ರ. ಅಂದರೆ, ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2020-21ನೇ ಸಾಲಿನ ಅಂತ್ಯಕ್ಕೆ ರಾಜ್ಯದ ಬೊಕ್ಕಸಕ್ಕೆ ಸುಮಾರು 5,805 ಕೋಟಿ ರೂ. ತೆರಿಗೆ ಖೋತಾ ಆಗಿದೆ. ಈ ಖೋತಾದಿಂದ ಹೊರಬರುವ ನಿಟ್ಟಿನಲ್ಲಿ ಸರ್ಕಾರ ಬರೋಬ್ಬರಿ 57,000 ಕೋಟಿ ರೂ. ಹೆಚ್ಚುವರಿ ಸಾಲವನ್ನು ಮಾಡಿದೆ. ಇದೀಗ ಕೊಂಚ ಚೇತರಿಕೆಯ ಸಂದರ್ಭದಲ್ಲಿ ಮತ್ತೆ ಲಾಕ್‌ಡೌನ್ ಹೇರಿದರೆ ಅದರ ಪ್ರತಿಕೂಲ ಪರಿಣಾಮ ಆರ್ಥಿಕತೆ ಮೇಲೆ ದೀರ್ಘಕಾಲೀನವಾಗಿರಲಿದೆ ಎಂದು ಆರ್ಥಿಕ ತಜ್ಞರು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಮತ್ತೆ ಲಾಕ್‌ಡೌನ್ ಹೇರಿದರೆ ಕಾರ್ಮಿಕ ವರ್ಗ, ರೈತರು ಸೇರಿದಂತೆ ದುರ್ಬಲ ವರ್ಗದವರಿಗೆ ಪರಿಹಾರ ಹಣ ನೀಡುವುದು ಬಹುತೇಕ ಅಸಾಧ್ಯ ಎಂದು ತಿಳಿಸಿದ್ದಾರೆ.
ರಾಜ್ಯದ ಜಿಡಿಪಿ ಮಹಾಕುಸಿತ: ಮೊದಲ ಲಾಕ್ಡೌನ್ಗೆ ರಾಜ್ಯದ ಜಿಡಿಪಿಯೂ ಭಾರೀ ಕುಸಿತ ಕಂಡಿತ್ತು. ರಾಜ್ಯದ ಒಟ್ಟು ಜಿಡಿಪಿ ಶೇ. 2.2ರ ವೃದ್ಧಿ ಕಾಣಲಿದ್ದು, ಸುಮಾರು 16,65,320 ಕೋಟಿ ರೂ.ಗೆ ತಲುಪಲಿದೆ ಎಂದು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ತಿಳಿಸಿದೆ.
ಲಾಕ್‌ಡೌನ್ ಹಿನ್ನೆಲೆ 2020-21ರ ವರ್ಷದಲ್ಲಿ ರಾಜ್ಯದ ಜಿಡಿಪಿ ಶೇ. 2.6ರಷ್ಟು ಕುಸಿತ ಕಾಣಲಿದೆ. ಕರ್ನಾಟಕದ ಜಿಡಿಪಿಯು ಹಿಂದಿನ ಆರ್ಥಿಕ ವರ್ಷದಲ್ಲಿ ಶೇ. 5ರಷ್ಟು ಬೆಳವಣಿಗೆ ಕಂಡಿತ್ತು. ರಾಜ್ಯದ ಕೃಷಿ ಕ್ಷೇತ್ರವು ಶೇ. 6.4ರಷ್ಟು ಬೆಳವಣಿಗೆ ದಾಖಲಿಸಲಿದೆ. ಕೈಗಾರಿಕೆ ಮತ್ತು ಸೇವಾ ವಲಯಗಳು ಕ್ರಮವಾಗಿ ಶೇ. 5.1 ಮತ್ತು ಶೇ. 3.1ರಷ್ಟು ಕುಸಿಯಲಿವೆ ಎಂದು ಆರ್ಥಿಕ ಸಮೀಕ್ಷೆ ಅಂದಾಜು ಮಾಡಿದೆ. ಮತ್ತೊಂದು ಬಾರಿ ಲಾಕ್‌ಡೌನ್ ಮಾಡಿದರೆ 2021-22ರ ಜಿಡಿಪಿ ಇನ್ನಷ್ಟು ಕುಸಿತ ಕಾಣಲಿದೆ ಎಂದು ಅರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ರಾಜ್ಯದ ಆರ್ಥಿಕತೆ ಕನಿಷ್ಠ 10-15 ವರ್ಷ ಹಿಂದಕ್ಕೆ ಹೋಗುವ ಆತಂಕ ತಜ್ಞರದ್ದು.
ನಿರುದ್ಯೋಗ ಪ್ರಮಾಣ ಹೆಚ್ಚುವ ಭೀತಿ: ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ಕರ್ನಾಟಕ ಅತಿ ಹೆಚ್ಚು ನಿರುದ್ಯೋಗ ಪ್ರಮಾಣವನ್ನು ಹೊಂದಿತ್ತು. ರಾಷ್ಟ್ರೀಯ ನಿರುದ್ಯೋಗ ಪ್ರಮಾಣಕ್ಕಿಂತಲೂ ಹೆಚ್ಚಿನ ನಿರುದ್ಯೋಗವನ್ನು ಕರ್ನಾಟಕ ಹೊಂದಿತ್ತು. ಕಳೆದ ವರ್ಷ ಲಾಕ್‌ಡೌನ್ ವೇಳೆ ಕರ್ನಾಟಕದ ನಿರುದ್ಯೋಗ ಪ್ರಮಾಣ 29.8% ತಲುಪಿತ್ತು.
ಲಾಕ್‌ಡೌನ್ ತೆರವಾದ ಬಳಿಕ ನಿಧಾನವಾಗಿ ಆರ್ಥಿಕ ಚಟುವಟಿಕೆ ಆರಂಭಗೊಂಡ ಕಾರಣ ಇದೀಗ ನಿರುದ್ಯೋಗ ಪ್ರಮಾಣದಲ್ಲೂ ಸುಧಾರಣೆ ಕಂಡಿದೆ. 2021 ಮಾರ್ಚ್ ವೇಳೆಗೆ ಕರ್ನಾಟಕದ ನಿರುದ್ಯೋಗ ಪ್ರಮಾಣ 1.2%ಕ್ಕೆ ಇಳಿಕೆ ಕಂಡಿದೆ. ಒಂದು ವೇಳೆ ಈಗ ಮತ್ತೆ ಲಾಕ್‌ಡೌನ್ ಹಾಕಿದರೆ ನಿರುದ್ಯೋಗ ಪ್ರಮಾಣ ಮತ್ತೆ ಸುಮಾರು 20% ಏರಿಕೆ ಕಾಣುವ ಆತಂಕ ಆರ್ಥಿಕ ತಜ್ಞರದ್ದು.
ಬೆಂಗಳೂರು ಲಾಕ್ ಮಾಡಿದರೆ ದೊಡ್ಡ ಹೊಡೆತ: ರಾಜ್ಯದ ಆದಾಯದಲ್ಲಿ ಬಹುತೇಕ ಪಾಲು ರಾಜಧಾನಿ ಬೆಂಗಳೂರಿನದ್ದು. ಒಟ್ಟು ರಾಜ್ಯದ ಆದಾಯದಲ್ಲಿ ಸುಮಾರು 60% ಬರುವುದು ಬೆಂಗಳೂರಿನಿಂದಲೇ. ಒಂದು ವಾರ ಬೆಂಗಳೂರು ಲಾಕ್‌ಡೌನ್ ಮಾಡಿದರೆ ರಾಜ್ಯದ ಬೊಕ್ಕಸಕ್ಕೆ ಸುಮಾರು 4,000-5,000 ಕೋಟಿ ರೂ. ಆರ್ಥಿಕ ನಷ್ಟ ಆಗಲಿದೆ. ಇದರಿಂದ ಈ ಬಾರಿ ರಾಜ್ಯದ ವಾರ್ಷಿಕ ಆದಾಯ ಸಂಗ್ರಹದ ಗುರಿಯ ಸನಿಹಕ್ಕೂ ಹೋಗುವುದು ಕಠಿಣ ಎಂದು ಆರ್ಥಿಕ ಇಲಾಖೆ ಆತಂಕ ವ್ಯಕ್ತಪಡಿಸಿದೆ.
ಮತ್ತೊಂದು ಲಾಕ್‌ಡೌನ್ ಮಾಡಿದರೆ ಅಭಿವೃದ್ಧಿ ಕೆಲಸ, ಮೂಲ ಸೌಕರ್ಯಗಳಿಗೂ ಹಣ ಒದಗಿಸಲು ಬಹುತೇಕ ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮತ್ತೊಂದು ಲಾಕ್‌ಡೌನ್ ತಾಳಿಕೊಳ್ಳುವ ಸಾಮರ್ಥ್ಯ ಕರ್ನಾಟಕಕ್ಕೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಆದಾಯ ಮೂಲ ಜಿಎಸ್ಟಿ. 2020-21ನೇ ಸಾಲಿನಲ್ಲಿ ರಾಜ್ಯದಲ್ಲಿ ಜಿಎಸ್ಟಿ ಸಂಗ್ರಹ ಸುಮಾರು 55,099 ಕೋಟಿ ರೂ. ಆಗಿದೆ. ಈ ಪೈಕಿ 60% ಪಾಲು ಬೆಂಗಳೂರಿನದ್ದಾಗಿದೆ. ಇತ್ತ ಅಬಕಾರಿ ಇಲಾಖೆ 2020-21ನೇ ಸಾಲಿನಲ್ಲಿ 23,269 ಕೋಟಿ ರೂ. ತೆರಿಗೆ ಸಂಗ್ರಹಿಸಿದ್ದು, ಈ ಪೈಕಿ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಾಲು ಸುಮಾರು 55% ಆಗಿದೆ.
ಇನ್ನು ಮುದ್ರಾಂಕ ಮತ್ತು ನೋಂದಣಿ ಶುಲ್ಕ ಸಂಗ್ರಹದಲ್ಲಿ ಸುಮಾರು 70-74% ಬೆಂಗಳೂರಿನ ಪಾಲಾಗಿದೆ. 2020-21ನೇ ಸಾಲಿನಲ್ಲಿ 10,379 ಕೋಟಿ ರೂ. ಸಂಹ್ರಹವಾಗಿದ್ದು, ಬಹುಪಾಲು ಬೆಂಗಳೂರಿನಿಂದ ಉತ್ಪತ್ತಿಯಾಗಿದೆ. ಇನ್ನು ಸಾರಿಗೆ ಇಲಾಖೆ ಮೋಟಾರು ವಾಹನ ತೆರಿಗೆ ರೂಪದಲ್ಲಿ 2020-21ರಲ್ಲಿ 5,536 ಕೋಟಿ ಸಂಗ್ರಹಿಸಿದೆ. ಈ ಪೈಕಿ 52% ಬೆಂಗಳೂರಿನ ಕೊಡುಗೆಯಾಗಿದೆ.
ಮುಂದುವರಿಯಲಿರುವ ಆದಾಯ ಕೊರತೆ: ಮೊದಲ ಲಾಕ್‌ಡೌನ್ ಹಿನ್ನೆಲೆ ರಾಜ್ಯ ಆದಾಯ ಕೊರತೆಯನ್ನು 2021-22ರಲ್ಲೂ ಅನುಭವಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೆಚ್ಚದ ಮೇಲೆ ನಿಯಂತ್ರಣ ಹೇರುವುದರ ಜೊತೆಗೆ ರಾಜಸ್ವ ಸಂಗ್ರಹ ಹೆಚ್ಚಿಸುವುದು ಕಷ್ಟಕರವಾಗಲಿದೆ ಎಂದು ತಿಳಿಸಿದ್ದಾರೆ.
ಹೀಗಾಗಿ ಸಾಲದ ಮೊತ್ತವನ್ನು ಬಂಡವಾಳ ವೆಚ್ಚಕ್ಕೆ ಸಂಪೂರ್ಣವಾಗಿ ಬಳಸಲು ಸಾಧ್ಯವಿಲ್ಲ. ಹೀಗಾಗಿ 2021-22ನೇ ಸಾಲಿನಲ್ಲೂ ಬಂಡವಾಳ ವೆಚ್ಚಕ್ಕೆ ಹಣಕಾಸು ಕೊರತೆ ಎದುರಾಗಲಿದೆ. ಜೊತೆಗೆ 2021-22ರಲ್ಲಿ ಜಿಎಎಸ್ಟಿ ಪರಿಹಾರವೂ ಕೊನೆಯಾಗಲಿದೆ. ಈ ವ್ಯತಿರಿಕ್ತ ಹಣಕಾಸು ಸ್ಥಿತಿಯಲ್ಲಿ ಮತ್ತೆ ಲಾಕ್‌ಡೌನ್ ಹೇರಿದರೆ ಆದಾಯ ಕೊರತೆ ಮಿತಿ ಮೀರಲಿದ್ದು, ರಾಜ್ಯದ ಹಣಕಾಸು ನಿರ್ವಹಣೆಯೇ ಬುಡಮೇಲಾಗಲಿದೆ ಎಂದು ಆರ್ಥಿಕ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.