ಬೆಂಗಳೂರು: ಪಿಯುಸಿ ಪರೀಕ್ಷೆಯು ಮಾರ್ಚ್ ತಿಂಗಳಲ್ಲಿ ನಡೆಯಲಿದ್ದು, ಈ ಕುರಿತು ಸಂಪೂರ್ಣವಾಗಿ ಪರಿಶೀಲನೆ ಮಾಡಿದ್ದೇನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುರೇಶ್ ಕುಮಾರ್ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಿಯು ಪರೀಕ್ಷೆ ಹಿನ್ನೆಲೆ, ಮೂರು ಹಂತಗಳಲ್ಲಿ ಈ ವರ್ಷ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪೇಪರ್ ಸೋರಿಕೆ ಆಗದಂತೆ, ಸಾಮೂಹಿಕ ನಕಲಿಗೆ ಅವಕಾಶ ಕೊಡದಂತೆ ಹಾಗೂ ಮೌಲ್ಯ ಮಾಪನದಲ್ಲಿ ಅನ್ಯಾಯ ಆಗದಂತೆ ನೋಡಿಕೊಳ್ಳಲು ಸಭೆ ನಡೆಸಿರುವುದಾಗಿ ಹೇಳಿದರು.
ಇನ್ನು ಕಳೆದ 4 ವರ್ಷದ ಹಿಂದೆ ಪಿಯು ಕೆಮಿಸ್ಟ್ರಿ ಪರೀಕ್ಷೆ ಎಷ್ಟು ದೊಡ್ಡ ಸಮಸ್ಯೆ ಆಗಿತ್ತು ಎಂಬುದನ್ನ ನೋಡಿದ್ದೇವೆ. ಇಂದಿಗೂ ಅದನ್ನ ನೆನಪು ಮಾಡಿಕೊಂಡರೆ ಗಾಬರಿ ಆಗುತ್ತೆ. ನಿನ್ನೆ ಕೂಡ ಈ ಸಂಬಂಧ ಪೊಲೀಸ್ ಇಲಾಖೆ ಜೊತೆ ಮಾತಾಡಿದ್ದೇನೆ. ಈ ಕಿಂಗ್ಪಿನ್ಗಳ ಕುರಿತು ಎಚ್ಚರ ವಹಿಸಲು ಹೇಳಿದ್ದೇನೆ. ಇನ್ನು ಜನವರಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಜೊತೆಗೆ ಜಂಟಿ ಸಭೆ ನಡೆಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ರು.
ಇನ್ನು, ಮೌಲ್ಯಮಾಪನ ಸಂದರ್ಭದಲ್ಲಿ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸುವ ವಿಚಾರವಾಗಿ ಮಾತನಾಡಿದ ಸಚಿವರು, ಎಲ್ಲಾ ಮೌಲ್ಯಮಾಪಕರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಬಹಿಷ್ಕಾರ ಮಾಡಬೇಡಿ, ನಾನು ನಿಮ್ಮ ಜೊತೆ ಸಭೆ ಕರೆದು ಮಾತನಾಡುತ್ತೇನೆ. ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಇದೇ ವೇಳೆ ಭರವಸೆ ನೀಡಿದ್ರು.