ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ 15-18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳ ಶಿಕ್ಷಣಕ್ಕೆ ವಿಘ್ನವಾಗಬಾರದು ಅಂದರೆ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಶಿಕ್ಷಣ ಸಚಿವ ಬಿ.ನಾಗೇಶ್ ಕರೆ ನೀಡಿದರು.
ಕೋವಿಡ್ ಜೊತೆಗೆ ಜೀವನ ನಡೆಸುವುದು ನಿರ್ವಾಯವಾಗಿದ್ದು, ಸೋಂಕು ಎದುರಿಸುವ ದೃಷ್ಟಿಯಿಂದ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಈಗಾಗಲೇ ಕೋಟ್ಯಂತರ ಜನರು ಲಸಿಕೆ ಹಾಕಿಸಿಕೊಂಡಿದ್ದು, ಇದೀಗ ಮಕ್ಕಳ ಸರದಿ ಬಂದಿದೆ. ಇಂದಿನಿಂದ 15-18 ವರ್ಷದ ಮಕ್ಕಳಿಗೆ ಲಸಿಕೆ ಆರಂಭವಾಗಿದ್ದು, ಎಲ್ಲ ತಾಲೂಕುಗಳಲ್ಲಿ ನೀಡಲಾಗುತ್ತದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕೊರೊನಾ ಸೋಂಕಿನ ಕಾರಣಕ್ಕೆ ಯಾವ ವಿದ್ಯಾರ್ಥಿಗಳ ಶಿಕ್ಷಣವೂ ಅಪೂರ್ಣವಾಗಬಾರದು. ಹೀಗಾಗಿ ಲಸಿಕಾ ಅಭಿಯಾನದಲ್ಲಿ ಭಾಗಿಯಾಗಬೇಕಿದೆ. ಪೋಷಕರು ಉತ್ಸಾಹ ತೋರಿ ಮಕ್ಕಳಿಗೆ ಲಸಿಕೆ ಹಾಕಿಸಿ, ಇದರಿಂದ ಶಾಲೆಯನ್ನು ಪೂರ್ಣವಾಗಿ ನಡೆಸಲು ಇದು ಸಹಕಾರಿಯಾಗಲಿದೆ. ಲಸಿಕೆ ಪಡೆದ ನಂತರವೂ ಕೋವಿಡ್ ನಿಯಮಗಳಾದ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸ್ ಮಾಡುವುದನ್ನು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.
ಲಸಿಕೆ ಪಡೆದ ಮಕ್ಕಳಿಗೆ ಮರುದಿನ ರಜೆ:
ಇನ್ನು ಕೋವಿಡ್ ಲಸಿಕೆ ಪಡೆದ ನಂತರ ಸಣ್ಣ ಜ್ವರ, ಮೈಕೈ ನೋವು, ತಲೆ ನೋವು ಬರುವುದು ಸಹಜ. ಹಾಗಾಗಿ ಲಸಿಕೆ ಪಡೆದ ಮಕ್ಕಳಿಗೆ ಮರುದಿನ ರಜೆ ನೀಡುವಂತೆ ಪೋಷಕರು ಒತ್ತಾಯಿಸಿದ್ದಾರೆ. ಹೀಗಾಗಿ ಈ ವಿಚಾರವಾಗಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಲಸಿಕೆ ಪಡೆದ ನಂತರ ರಜೆ ತೆಗೆದುಕೊಳ್ಳಬಹುದು ಅಥವಾ ತರಗತಿಗೆ ಹಾಜರಾಗುವುದು ವಿದ್ಯಾರ್ಥಿಗಳ ಆಯ್ಕೆಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಿಎಂ ಚಾಲನೆ