ಬೆಂಗಳೂರು: ಪಾದರಾಯನಪುರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಗತವಾಗಿ ಕ್ರಮಕ್ಕೆ ಒತ್ತಾಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ಒಂದು ಸಮುದಾಯವನ್ನು ಗುರಿಯಾಗಿಸಿ ಕ್ರಮ ಕೈಗೊಳ್ಳುವುದು ಬೇಡ ಎಂದಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮುಸ್ಲಿಂ ಮುಖಂಡರೊಂದಿಗೆ ನಡೆದ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಘಟನೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಆದರೆ ಸರ್ಕಾರ ಇಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸುವ ಬದಲು, ವ್ಯಕ್ತಿಗತವಾಗಿ ತಪ್ಪಿತಸ್ಥರನ್ನು ಗುರುತಿಸಿ ಕ್ರಮ ಕೈಗೊಳ್ಳಲಿ. ಸರ್ಕಾರದ ಯಾವುದೇ ನಿರ್ಧಾರಕ್ಕೆ ನಾವು ಸಹಕಾರ ನೀಡುತ್ತೇವೆ. ನಮ್ಮ ಬೆಂಬಲ ಸರ್ಕಾರಕ್ಕೆ ಸದಾ ಇರಲಿದೆ ಎಂದಿದ್ದಾರೆ.
ನಾನು ಸಿಎಂ ಬಳಿ ಮನವಿ ಮಾಡುತ್ತೇನೆ. ಇದು ಕೆಲ ವ್ಯಕ್ತಿಗಳು ಮಾಡಿದ ಅಪರಾಧ, ಇಡೀ ಸಮಾಜ ಮಾಡಿರುವ ಅಪರಾಧವಲ್ಲ. ವ್ಯಕ್ತಿಗಳ ಅಪರಾಧವನ್ನು ಸಮಾಜದ ಅಪರಾಧವೆಂದು ತೋರಿಸುವುದು ಸರಿಯಲ್ಲ. ಕಾನೂನು ಉಲ್ಲಂಘಿಸಿ ಸರ್ಕಾರದ ವಿರುದ್ಧವಾಗಿ ನಡೆದುಕೊಳ್ಳುವವರ ಮೇಲೆ ಕ್ರಮ ಕೈಗೊಳ್ಳಿ ಎಂದಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದ ನಾಯಕರ ತುರ್ತು ಸಭೆ ಕರೆದು ಚರ್ಚಿಸಿದ್ದೇನೆ. ಎಲ್ಲರನ್ನೂ ಆಹ್ವಾನಿಸಿದ್ದೆ. ಜಮೀರ್ ಕೂಡ ಬರುವವರಿದ್ದರು, ನಾನೇ ಬೇಡ ಎಂದೆ. ಕ್ಷೇತ್ರದಲ್ಲಿ ಸೂಕ್ಷ್ಮ ಪರಿಸ್ಥಿತಿ ಇದೆ. ಅಲ್ಲಿದ್ದು, ಎಲ್ಲವನ್ನೂ ಗಮನಿಸಿ ಎಂದು ಸೂಚಿಸಿದ್ದೇನೆ. ಅವರು ಅಲ್ಲಿದ್ದು, ಪರಿಸ್ಥಿತಿ ಗಮನಿಸುತ್ತಿದ್ದಾರೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.