ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೂ ಹಿಜಾಬ್ ವಿವಾದಕ್ಕೆ ಪ್ರಚೋದನೆ ಕೊಡಲು ಮುಖ್ಯ ಕಾರಣಕರ್ತರು. ಪ್ರಚೋದನೆಗೆ ಮೂಲ ಕಾರಣಕರ್ತರೇ ಪ್ರತಿಪಕ್ಷಗಳು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಆರೋಪಿಸಿದರು.
ನಗರದ ಶಕ್ತಿಭವನದ ಬಳಿ ಮಾತನಾಡಿದ ಅವರು, ಗಲಭೆ ಹಿಂದೆ ಯಾರಿದ್ದಾರೆ ಅಂತ ಗೃಹ ಇಲಾಖೆ ತನಿಖೆ ಮಾಡುತ್ತಿದೆ. ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾವಣೆ ಆಗಿದೆ. ವಿಸ್ತೃತ ಪೀಠದ ತೀರ್ಪು, ಸಲಹೆ ಏನಿರುತ್ತೆ ನೋಡಬೇಕು. ಸಮವಸ್ತ್ರ ವಿಚಾರದಲ್ಲಿ ಸರ್ಕಾರ ಈಗಾಗಲೇ ಸ್ಪಷ್ಟ ನಿಲುವು ತೆಗೆದುಕೊಂಡಿದೆ. ತರಗತಿಗಳೊಳಗೆ ಹಿಜಾಬ್, ಕೇಸರಿ ಶಾಲುಗಳಿಗೆ ಅವಕಾಶ ಇಲ್ಲ. ಸರ್ಕಾರದ ನಿಲುವಿನಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.
ರಾಜ್ಯದಲ್ಲಿ ಶಾಂತಿ ನೆಲೆಸಲಿ ಅಂತ ಪ್ರೌಢಶಾಲೆ, ಕಾಲೇಜುಗಳಿಗೆ ರಜೆ ಕೊಡಲಾಗಿದೆ. ಆದರೆ, ರಜೆ ಶಾಶ್ವತ ಪರಿಹಾರ ಅಲ್ಲ, ತಾತ್ಕಾಲಿಕ ಕ್ರಮ. ಮೂರು ದಿನಕ್ಕೆ ಮಾತ್ರ ರಜೆ ಮೀಸಲು, ರಜೆ ಮುಂದುವರೆಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಆಗಿಲ್ಲ ಎಂದು ತಿಳಿಸಿದರು.
ಸಚಿವ ಈಶ್ವರಪ್ಪರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ರಾಷ್ಟ್ರಧ್ವಜ ಬದಲಾವಣೆ ಮಾಡಲ್ಲ, ಈಗ ಇರುವ ರಾಷ್ಟ್ರಧ್ವಜವೇ ಇರಲಿದೆ. ಈಶ್ವರಪ್ಪ ಅವರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಎಂದು ತಿಳಿಸಿದರು.
ಇದನ್ನೂ ಓದಿ: ಮಧ್ಯಂತರ ಆದೇಶಕ್ಕೆ ಹೈಕೋರ್ಟ್ ನಕಾರ : ಸಿಜೆ ಅಂಗಳಕ್ಕೆ ಹಿಜಾಬ್ ಕೇಸ್.. ಇಂದಿನ ವಾದ- ಪ್ರತಿವಾದ ಹೀಗಿತ್ತು!