ಬೆಂಗಳೂರು: ಡಿ.ಜೆ. ಹಳ್ಳಿ, ಕೆ. ಜಿ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಮಾಜಿ ಮೇಯರ್ ಸಂಪತ್ ರಾಜ್ಗೆ ಸಿಸಿಬಿ ಎಲ್ಲೆಡೆ ತಲಾಷ್ ನಡೆಸಿದೆ.
ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಂಪತ್ ರಾಜ್ ಮೈಸೂರಿಗೆ ತೆರಳಿ ಅಲ್ಲಿ ಖಾಸಗಿ ಹೋಟೆಲ್ನಲ್ಲಿ ತಂಗಿದ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಹೋಟೆಲ್ ಮೇಲೆ ನಿನ್ನೆ ತಡರಾತ್ರಿ ಸಿಸಿಬಿ ದಾಳಿ ನಡೆಸಿ ಪರಿಶೀಲನೆ ಮಾಡಿದಾಗ ಸಂಪತ್ ರಾಜ್ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ. ಅಲ್ಲಿಂದ ಸಂಪತ್ ರಾಜ್ ಮತ್ತೆ ಪರಾರಿ ಆಗಿದ್ದಾರೆ ಎನ್ನಲಾಗುತ್ತಿದೆ.
ಮೂರು ವಿಶೇಷ ತಂಡಗಳು ಸಂಪತ್ ರಾಜ್ ಬೆನ್ನಟ್ಟಿವೆ, ಮಾಜಿ ಮೇಯರ್ ಮುಂಬೈ ಕಡೆಗೆ ಪ್ರಯಾಣ ಬೆಳೆಸಿರುವ ಗುಮಾನಿ ಮೇರೆಗೆ ಒಂದು ತಂಡ ಮುಂಬೈಗೆ ತೆರಳಿ ಶೋಧ ನಡೆಸುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಮತ್ತೊಂದೆಡೆ ಆಸ್ಪತ್ರೆಯಿಂದ ತೆರಳುವ ಸಿಸಿಟಿವಿ ದೃಶ್ಯಗಳನ್ನು ಕೂಡ ಜಪ್ತಿ ಮಾಡಿದ್ದು, ಆತ ತೆರಳಿದ ಮಾರ್ಗಗಳು ಲೋಕೇಷನ್ ಆಧಾರದ ಮೇರೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸದ್ಯ ತಲೆಮರೆಸಿಕೊಂಡಿರುವ, ಸಂಪತ್ ರಾಜ್ಗೆ ನ್ಯಾಯಾಲಯ ಕೂಡ ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಿದೆ. ಹೀಗಾಗಿ ಸಂಪತ್ ತಾನೇ ಖುದ್ದಾಗಿ ಬಂದು ವಿಚಾರಣೆಗೆ ಹಾಜರಾಗಬೇಕು. ಅಥವಾ ಸಿಸಿಬಿ ಪೊಲೀಸರು ಬಂಧಿಸಿ, ತನಿಖೆಗೆ ಒಳಪಡಿಸಿದಾಗ ವಿಚಾರಣೆಗೆ ಸಹಕಾರ ನೀಡಬೇಕಾದದ್ದು ಅನಿವಾರ್ಯವಾಗಲಿದೆ.