ಬೆಂಗಳೂರು: ಉಪ ಚುನಾವಣೆ ಮುಗಿಯುತ್ತಿದ್ದಂತೆ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಕುರಿತು ವರಿಷ್ಠರ ಜೊತೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶಿರಾದಲ್ಲಿ ಪ್ರಚಾರಕ್ಕೆ ತೆರಳುವ ಮುನ್ನ ಮಾತನಾಡಿದ ಸಿಎಂ, ನಾನು ಪ್ರಚಾರಕ್ಕೆ ಹೋಗಬೇಕು ಅಂತಾ ಇರಲಿಲ್ಲ. ಆದರೆ ಸಿದ್ದರಾಮಯ್ಯ, ದೇವೇಗೌಡರು, ಡಿ.ಕೆ.ಶಿವಕುಮಾರ್, ಹೆಚ್.ಡಿ.ಕುಮಾರಸ್ವಾಮಿ ಪ್ರಚಾರಕ್ಕೆ ಹೋಗಿದ್ದಾರೆ. ಮುಖ್ಯಮಂತ್ರಿಯಾಗಿ ನಾನು ಹೋಗಲಿಲ್ಲ ಅಂದರೆ ತಪ್ಪಾಗುತ್ತದೆ. ಅದಕ್ಕೆ ಎರಡು ಕಡೆ ಪ್ರಚಾರಕ್ಕೆ ಹೋಗುತ್ತೇನೆ. ಇಂದು ಶಿರಾ, ನಾಳೆ ಆರ್.ಆರ್ ನಗರದಲ್ಲಿ ಪ್ರಚಾರ ನಡೆಸಲಿದ್ದೇನೆ ಎಂದು ತಿಳಿಸಿದರು.
ಸಂಪುಟ ವಿಸ್ತರಣೆ ವಿಚಾರ ಸಂಬಂಧ ಚುನಾವಣೆ ಮುಗಿದ ಮೇಲೆ ದೆಹಲಿಗೆ ಹೋಗಿ ವರಿಷ್ಠರ ಜೊತೆ ಮಾತುಕತೆ ನಡೆಸಿ ಬರುತ್ತೇನೆ. ಬಳಿಕ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಹೇಳಿದರು.
ಚುನಾವಣೆ ಮುಗಿದ ಮೇಲೆ ಎಲ್ಲವೂ ಬದಲಾವಣೆ ಆಗುವುದು ನಿಶ್ಚಿತ. ಕಾಂಗ್ರೆಸ್ ಮತ್ತು ಜೆಡಿಎಸ್ಗೆ ದೊಡ್ಡ ಮುಖಭಂಗ ಆಗುತ್ತದೆ. ಇದುವರೆಗೂ ನಾನು ಒಂದು ಶಬ್ದ ಮಾತನಾಡಿಲ್ಲ. ದೊಡ್ಡ ಅಂತರದಲ್ಲಿ ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಇದುವರೆಗೂ ಯಾವುದೇ ಟೀಕೆ ಮಾಡಿಲ್ಲ, ಯಾರ ಹೆಸರು ಹೇಳಿಲ್ಲ. ಚುನಾವಣೆ ಮುಗಿದ ಮೇಲೆ ಅವರೇ ಉತ್ತರ ಕೊಡಲಿ ಎಂದರು.