ಬೆಂಗಳೂರು : ರಾಜ್ಯ ವಿಧಾನಸಭೆಯಲ್ಲಿ ಶಾಸಕಾಂಗ-ಕಾರ್ಯಾಂಗ ನಡುವೆ ಜಟಾಪಟಿ ನಡೆದಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಅಭಿಪ್ರಾಯಪಟ್ಟಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಸಕಾಂಗ, ಕಾರ್ಯಾಂಗ ಪರಸ್ಪರ ಅವಲಂಬಿತವಾಗಿ ಸಾಗಬೇಕು. ಆದರೆ, ಇದು ಸರಿಯಾಗಿ ಸಾಗದಿದ್ದಾಗ ನ್ಯಾಯಾಂಗ ಮಧ್ಯಪ್ರವೇಶ ಮಾಡಬೇಕಾಗುತ್ತದೆ. ಸಾಮಾಜಿಕ ಕಳಕಳಿಯುಳ್ಳ ನಾಲ್ಕನೇ ಅಂಗವಾದ ಮಾಧ್ಯಮವು ತನ್ನ ಮಹತ್ವದ ಪಾತ್ರ ನಿಭಾಯಿಸಬೇಕಾಗಿ ಬರಲಿದೆ. ಸಂವಿಧಾನಕ್ಕೆ ಗೌರವ ನೀಡಬೇಕು. ಸಂವಿಧಾನದತ್ತ ರಾಷ್ಟ್ರದಲ್ಲಿ ಇಂದು ನಡೆಯುತ್ತಿರುವ ಅತ್ಯಾಚಾರ ಆತಂಕ ಮೂಡುತ್ತಿದೆ. ಅತ್ಯಾಚಾರಕ್ಕೆ ಒಳಗಾಗಿ ಮಗುವನ್ನು ಹೆರುವವರು ಬೀದಿಯಲ್ಲಿ ಮಕ್ಕಳನ್ನು ಬಿಟ್ಟು ತೆರಳುತ್ತಿದ್ದಾರೆ. ದೇಶ ಯಾವ ಸ್ಥಿತಿ ತಲುಪುತ್ತಿದೆ ಎಂದು ಪ್ರಶ್ನಿಸಿದರು.
ಇವತ್ತಿಗೂ ಸಂವಿಧಾನದ ಆಶಯವನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ಇದೆ. ನಮ್ಮದು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಶೇ.33ರಷ್ಟು ಅನಕ್ಷರತೆ ಇದೆ. ಮಕ್ಕಳು ಬಿಸಿಯೂಟಕ್ಕೆ ಕಾಯುವ ಸ್ಥಿತಿ ಇದೆ. ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ದೇಶ ಸಾಕಷ್ಟು ಬೆಳೆದಿದೆ. ಆದರೆ, ಆಗಬೇಕಾದ ಅಭಿವೃದ್ಧಿ ಅಗತ್ಯ ಇನ್ನಷ್ಟು ಹೆಚ್ಚಿದೆ. ಅಂಬೇಡ್ಕರ್ಗೆ ತಡವಾಗಿ ಭಾರತ ರತ್ನ ನೀಡಲಾಯಿತು. ಅದನ್ನು ನೀಡಿದವರು ಯಾರು, ನೋಡಿದವರು ಯಾರು ಅಂತ ನೋಡಬೇಕು ಎಂದಾಗ ಎದ್ದುನಿಂತ ಕಾಂಗ್ರೆಸ್ ಸದಸ್ಯೆ ಡಾ. ಜಯಮಾಲಾ, ಶಾದಿಭಾಗ್ಯ ಅನುದಾನ ನಿಲ್ಲಿಸಲಾಗಿದೆ. ಪರಸ್ಪರ ತಾರತಮ್ಯ ಬೇಡ, ಈ ಬಗ್ಗೆ ತೇಜಸ್ವಿನಿ ಗೌಡ ಗಮನ ಸೆಳೆಯಲಿ ಎಂದರು.
ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಈ ಸಂದರ್ಭ ಅದರ ಚರ್ಚೆ ಬೇಡ, ಮುಂದೆ ಇದಕ್ಕೆ ಪ್ರತ್ಯೇಕ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು. ತೇಜಸ್ವಿನಿ ಗೌಡ ಮಾತು ಮುಂದುವರೆಸಿ, ಪ್ರತಿ ಬಡ ಮಹಿಳೆಗೆ ತಾಳಿ ಭಾಗ್ಯ ಕಲ್ಪಿಸುವ ಅಗತ್ಯ ಇದೆ ಎಂದು ಹೇಳಿದರು. ಸದಸ್ಯರಾದ ಸಿಎಂ ಇಬ್ರಾಹಿಂ ಮಾತನಾಡಿ, ನಮ್ಮಲ್ಲಿ ವಿವಾಹ ಹಾಗೂ ಆಸ್ತಿ ಎರಡರಲ್ಲಿ ಮಾತ್ರ ಹಕ್ಕಿದೆ. ನಮಗೆ ಎಲ್ಲಾ ಕಾನೂನು ಒಂದೇ. ಇಲ್ಲಿ ಧಾರೆ ಎರೆಯುವ ವ್ಯವಸ್ಥೆ ಇಲ್ಲ. ನಿಖಾ ವ್ಯವಸ್ಥೆ ಇದೆ. ಇಲ್ಲಿ ಗಂಡು ಹೆಣ್ಣಿಗೆ ಒಪ್ಪಿಗೆ ಇದ್ದಂತೆ ಆಯ್ತು. ಇಷ್ಟ ಇಲ್ಲವಾದರೆ ಬೇರೆಯಾಗಬಹುದು. ಇಲ್ಲಿ ಗಂಡು-ಹೆಣ್ಣಿಗೆ ಸಮಾನ ಅವಕಾಶ ಇದೆ. ಇದೇ ರೀತಿ ಸಂವಿಧಾನ ತಿದ್ದುಪಡಿ ಪುಟದ ರೀತಿಯಲ್ಲಿ ಆಗುತ್ತಿದೆ. ಸಂಪೂರ್ಣ ಬದಲಾವಣೆ ಅಸಾಧ್ಯ. ಸುಪ್ರೀಂಕೋರ್ಟ್ ಇದನ್ನು ಒಪ್ಪಲ್ಲ. ಅದನ್ನು ಅರಿಯಬೇಕು. ನಮ್ಮಲ್ಲಿ ಹೆಣ್ಣಿಗೆ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕಿದೆ. ಪತಿಯ ಆಸ್ತಿಯಲ್ಲೂ ಪಾಲಿದೆ ಎಂದು ವಿವರಿಸಿದರು.
ಕಾಂಗ್ರೆಸ್ ಸದಸ್ಯ ಸಿ ಎಂ ಲಿಂಗಪ್ಪ ಮಾತನಾಡಿ, 29 ದೇಶಕ್ಕೆ ಸಂವಿಧಾನ ಇಲ್ಲ. ನಮ್ಮದು ಚರಿತ್ರೆಯಲ್ಲಿ ಮೊಟ್ಟ ಮೊದಲ ಸಂವಿಧಾನ. ರಾಜರ ಕಾಲದಲ್ಲೂ ಸಂವಿಧಾನ ಇರಲಿಲ್ಲ. ಸ್ವಾತಂತ್ರ್ಯ ಸಂಗ್ರಾಮ ದೊಡ್ಡ ಹೋರಾಟವಾದರೆ, ಇದು ಬಂದ ನಂತರ ಸಂವಿಧಾನಕ್ಕಾಗಿ ನಡೆದ ಹೋರಾಟ ಇನ್ನೊಂದು ದೊಡ್ಡ ಯತ್ನ. ಸತತ ಪ್ರಯತ್ನದ ಬಳಿಕ ಸಂವಿಧಾನ ರಚನೆ ಆಯ್ತು. ಅಂಬೇಡ್ಕರ್ ಪಾತ್ರ ಬಹಳ ಪ್ರಮುಖ. ಇವರ ಜತೆ ಬಿ ಎನ್ ರಾಮರಾವ್ ಪಾತ್ರವೂ ಮುಖ್ಯವಾಗಿತ್ತು. ಬೆನೆಗಲ್ ರಾಮರಾವ್ ಕೊಟ್ಟ ಸಹಕಾರ ದೊಡ್ಡದು. ರಾವ್ ಆರ್ಬಿಐ ಗವರ್ನರ್ ಕೂಡ ಆಗಿದ್ದರು. ಬ್ರಿಟನ್ ಅಲಿಖಿತ ಪ್ರಜಾಪ್ರಭುತ್ವ ರಾಷ್ಟ್ರ ಆಗಿದ್ದು, ಪ್ರಜಾತಂತ್ರ ವ್ಯವಸ್ಥೆ ಸಮರ್ಥವಾಗಿ ನಡೆದುಕೊಂಡು ಸಾಗಿದೆ ಎಂದರು.
ಸಂವಿಧಾನ ಬದಲಾವಣೆ ಅಸಾಧ್ಯ, ಇತ್ತೀಚೆಗೆ ಮೂಲಭೂತ ಹಕ್ಕು ಸರಿಯಿಲ್ಲ. ಸಂವಿಧಾನ ಬದಲಿಸುತ್ತೇವೆ ಎನ್ನುವ ಮಾತು ಕೇಳಿ ಬರುತ್ತದೆ. ಆರ್ಟಿಕಲ್ 32 ಬಲವಾಗಿದ್ದು, ಮೂಲಭೂತ ಹಕ್ಕನ್ನು ಯಾರೂ ಬದಲಿಸುವಂತಿಲ್ಲ. ಸಂವಿಧಾನ ಬದಲಾವಣೆ ಅಸಾಧ್ಯ. ಈ ಆರ್ಟಿಕಲ್ ಐದು ರಿಟ್ಗಳ ಮೂಲಕ ದೇಶದಲ್ಲಿ ತುರ್ತು ಪರಿಸ್ಥಿತಿ ಇದ್ದರೂ ಮೂಲಭೂತ ಹಕ್ಕನ್ನು ರಕ್ಷಣೆ ಮಾಡಿಕೊಳ್ಳಬಹುದು ಎಂದಿದೆ. ಸಂವಿಧಾನ ಸಿದ್ಧಪಡಿಸಿದವರು ಉದಾತ್ತ ಗುಣದವರು, ಚಿಂತಕರು, ಯೋಚಿಸಿ ರಚಿಸಿದವರು. ಭಾರತದ ಸಂವಿಧಾನದಲ್ಲಿ ಯಾರೂ ಕೂಡ ಮೂಲಭೂತ ಹಕ್ಕು, ಪ್ರಿಯಾಂಬಲ್ ಬದಲಿಸಲು ಆಗಲ್ಲ. ಸುಪ್ರೀಂಕೋರ್ಟ್, ಶಾಸಕಾಂಗ, ಕಾರ್ಯಾಂಗದಿಂದ ಆಗಲ್ಲ. ಸಂವಿಧಾನ ಬದಲಿಸಲು ಮುಂದಾದರೆ ಸ್ವಾತಂತ್ರ್ಯ ಹೋರಾಟಕ್ಕಿಂತ ಶೇ.100ರಷ್ಟು ಹೆಚ್ಚು ರಕ್ತಪಾತ ಆಗಲಿದೆ ಎಂದು ಲಿಂಗಪ್ಪ ಹೇಳಿದರು.
ಸಂವಿಧಾನ ಬಂದು 70 ವರ್ಷ ಆಯಿತು. ಆದರೆ, ಅದರ ಅಳವಡಿಕೆ ಸಮಾಧಾನಕರವಾಗಿ ಆಗಿಲ್ಲ. ಮೂಲಭೂತ ಹಕ್ಕು, ದುಡಿಮೆ ಎರಡೂ ನಮಗೆ ಬೇಕು. ಮೂಲಭೂತ ಹಕ್ಕು ಬಿಗಿಯಾಗಿದೆ. ಫಂಡಮೆಂಟಲ್ ಡ್ಯೂಟೀಸ್ ಸಮರ್ಥವಾಗಿರಬೇಕು. ಸಂವಿಧಾನಕ್ಕೆ 123 ತಿದ್ದುಪಡಿ ತಂದಿರುವುದು ಹೆಚ್ಚಾಯಿತು. ಇನ್ನಾದರೂ ಕಡಿಮೆ ಆದರೆ ಅನುಕೂಲ ಎಂದರು. ಜೆಡಿಎಸ್ ಸದಸ್ಯ ಭೋಜೇಗೌಡ ಮಾತನಾಡಿ, ನಾವಿಂದು ಸ್ವಾತಂತ್ರ್ಯ ಅನುಭವಿಸುತ್ತಿದ್ದರೆ ಅದಕ್ಕೆ ಸಂವಿಧಾನ ನೀಡಿದ ಸ್ವಾತಂತ್ರ್ಯ ಕಾರಣ.
ಚರ್ಚೆಗೆ ಮುಂದಾಗಲು ವಿಳಂಬವಾಗಿರುವುದು ನಿಜಕ್ಕೂ ದುರ್ದೈವ. ಎಲ್ಲರನ್ನೂ ಎಲ್ಲಾ ಕಾಲಕ್ಕೂ ಮರಳು ಮಾಡುವುದು ಸಾಧ್ಯವಿಲ್ಲ. ಕೆಲವರನ್ನು ಕೆಲಕಾಲ, ಕೆಲವರನ್ನು ಎಲ್ಲಾ ಸಂದರ್ಭ ಮರಳು ಮಾಡಬಹುದು. ಭಾವೈಕ್ಯತೆ ನಮ್ಮ ರಾಷ್ಟ್ರದ ಆಸ್ತಿ. ಮುಂದಿನ ಪೀಳಿಗೆಗೆ ಭಾವೈಕ್ಯ ಬದುಕನ್ನು ವಿವರಿಸುವ ಕಾರ್ಯ ಆಗಬೇಕಿದೆ ಎಂದರು. ಸಂವಿಧಾನದ ಮೇಲೆ ಇವರು ಸುದೀರ್ಘವಾಗಿ ಮಾತನಾಡಿದ ನಂತರ ಸಭಾಪತಿಗಳು ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.