ಬೆಂಗಳೂರು: ಕೊರೊನಾ ಸೋಂಕು ಪರೀಕ್ಷೆ ಫಲಿತಾಂಶ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಪಾದರಾಯನಪುರದಲ್ಲಿ ಕೈಗೊಂಡಿದ್ದ ರ್ಯಾಂಡಮ್ (ಯಾದೃಚ್ಛಿಕ) ಟೆಸ್ಟ್ಅನ್ನು ನಿಲ್ಲಿಸಲು ಅಧಿಕಾರಿಗಳು ಸೂಚಿಸಿದ್ದಾರೆ.
ಈ ಹಿನ್ನಲೆ ಕಳೆದ ಎರಡು ದಿನದಿಂದ ಗಂಟಲು ದ್ರವ ಸಂಗ್ರಹಿಸುವುದನ್ನು ನಿಲ್ಲಿಸಲಾಗಿದೆ ಎಂದು ಬಿಬಿಎಂಪಿ ಚಾಮರಾಜಪೇಟೆ ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗಡೆ ಈಟಿವಿ ಭಾರತಗೆ ತಿಳಿಸಿದ್ದಾರೆ.
ಈ ಹಿಂದೆ ಎರಡು ಕಿಯೋಸ್ಕ್, ಬಿಎಂಟಿಸಿ ಬಸ್ ಹಾಗೂ ಕ್ಲಿನಿಕ್ ನಲ್ಲಿ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿತ್ತು. ಈಗ ಒಂದು ಕಿಯೋಸ್ಕ್ ಅನ್ನು ಶಿವಾಜಿನಗರಕ್ಕೆ ಶಿಫ್ಟ್ ಮಾಡಲಾಗಿದೆ. ಬೆಂಗಳೂರಿನ ಸುತ್ತಿಲಿನ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ರಾಮನಗರದ ಗಂಟಲು ದ್ರವದ ಸ್ಯಾಂಪಲ್ ಗಳನ್ನೂ ಬೆಂಗಳೂರು ಟೆಸ್ಟಿಂಗ್ ಕೇಂದ್ರಗಳಿಗೆ ಕಳಿಸಲಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕ್ವಾರಂಟೈನ್ ಅವಧಿ ಮುಗಿದ ಎಲ್ಲರ ಕೋವಿಡ್ ಟೆಸ್ಟ್ ನಡೆಸುವುದು ಅಗತ್ಯವಾದ್ದರಿಂದ ಸಧ್ಯ ಕಂಟೈನ್ಮೆಂಟ್ ವಲಯದ ರ್ಯಾಂಡಮ್ ಟೆಸ್ಟ್ ಸ್ಥಗಿತ ಮಾಡಲಾಗಿದೆ.
ಇನ್ನು ಶಿವಾಜಿನಗರದ ಚಾಂದಿನಿ ಚೌಕ್ ಕಂಟೈನ್ಮೆಂಟ್ ಅವಧಿ ಜೂ.6 ರಂದು ಮುಗಿಯಲಿದೆ. ಈ ಹಿನ್ನಲೆ ಈ ಪ್ರದೇಶದ 22 ಮನೆಗಳ 84 ಜನರ ಸ್ಯಾಂಪಲ್ ಕಲೆಕ್ಟ್ ಮಾಡಿ, ಟೆಸ್ಟ್ ಗಾಗಿ ಕಳಿಸಲಾಗಿದೆ. ಇನ್ನೊಂದೆಡೆ ರಿಜೆಂಟಾ ಹೋಟೆಲ್ ನಲ್ಲಿ ಎಸ್ ಕೆ ಗಾರ್ಡನ್ ಕೊಳೆಗೇರಿ ಪ್ರದೇಶದ ಕೊರೊನಾ ಸಂಪರ್ಕಿತರನ್ನ ಕ್ವಾರಂಟೈನ್ ಮಾಡಿ, ಸ್ಯಾಂಪಲ್ ಟೆಸ್ಟ್ ಗೆ ಕಳಿಸಲಾಗಿದೆ. ಉಳಿದಂತೆ ನಗರದ ಕಂಟೈನ್ಮೆಂಟ್ ಪ್ರದೇಶಗಳ ರ್ಯಾಂಡಮ್ ಟೆಸ್ಟ್ ನಡೆಯುತ್ತಿಲ್ಲ.
ಲೊ ರಿಸ್ಕ್ ರಾಜ್ಯದ ಪ್ರಯಾಣಿಕರಿಗೆ ಹೋಟೆಲ್ ಕ್ವಾರಂಟೈನ್ ಇಲ್ಲ:
ಇನ್ನು ಕಡಿಮೆ ರಿಸ್ಕ್ ಇರುವ ರಾಜ್ಯಗಳಿಂದ ಬರುವ ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡದೇ ಹೋಂ ಕ್ವಾರಂಟೈನ್ ಮಾಡಲು ಸರ್ಕಾರ ಅನುಮತಿಸಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೋಟೆಲ್ ಕ್ವಾರಂಟೈನ್ ರೂಂ ಸಮಸ್ಯೆಗಳಿಂದ ಸವಾಲಾಗಿರುವುದರಿಂದ ಇನ್ಮುಂದೆ ಕ್ವಾರಂಟೈನ್ ಇರುವುದಿಲ್ಲ.
ಇದಕ್ಕೆ ಪಾಲಿಕೆ ಮುಂಜಾಗ್ರತಾ ಕ್ರಮದ ಬಗ್ಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದು, ಸಧ್ಯದಲ್ಲೇ ಈ ನಿಯಮ ಜಾರಿಯಾಗಲಿದೆ. ಹೈರಿಸ್ಕ್ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶದಿಂದ ಬರುವವರು ಹಾಗೂ ಕೋವಿಡ್ ಪಾಸಿಟಿವ್ ಪ್ರಕರಣ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲು ಹೋಟೆಲ್ ರೂಂಗಳ ಅಗತ್ಯವಿರುವುದರಿಂದ ಉಳಿದವರನ್ನು ಹೋಂ ಕ್ವಾರಂಟೈನ್ ಮಾಡಲಿದ್ದಾರೆ.