ಬೆಂಗಳೂರು: ಲಾಕ್ಡೌನ್ ಸಡಿಲಿಕೆಯಿಂದ ಬೆಂಗಳೂರಿನಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ಯಾ ಅನ್ನೋ ಪ್ರಶ್ನೆ ಕಾಡಲಾಂಭಿಸಿದೆ. ಏಕೆಂದರೆ ಕಂಟೇನ್ಮೆಂಟ್ ಝೋನ್ ಬಿಟ್ಟು ಹೊರಗೂ ಕೂಡ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ.
ಈ ಬಗ್ಗೆ ಬಿಬಿಎಂಪಿ ಕಮಿಷನರ್ ಜೊತೆಗೆ ಮಾತನಾಡುತ್ತೇವೆ. ಇದರಿಂದ ನಮ್ಮ ಸಡಿಲಿಕೆ ಏನಾದರೂ ಕಾರಣವಾಗಿದ್ದರೆ ಅದರ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಒಟ್ಟಾರೆ 673 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಈವರಗೆ 29 ಜನ ಮೃತಪಟ್ಟಿದ್ದಾರೆ. 331 ಜನ ಗುಣಮುಖರಾಗಿದ್ದು, ಉಳಿದ ಪ್ರಕರಣಗಳಲ್ಲಿ 307 ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲಾಗಿದೆ. ಇಂದು 06 ಜನರನ್ನು ತೀವ್ರ ನಿಗಾ ಘಟಕಗಳಲ್ಲಿರಿಸಲಾಗಿದೆ. ಅಲ್ಲದೇ ಇಂದು 22 ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, ಈ ಪ್ರಕರಣಗಳಲ್ಲಿ, ದಾವಣಗೆರೆಯಿಂದ 12, ಬೆಂಗಳೂರಿನಿಂದ 3, ಬಾಗಲಕೋಟೆಯಿಂದ 2, ಬಳ್ಳಾರಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ, ಧಾರವಾಡದಿಂದ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ.
ರಾಜ್ಯಾದ್ಯಂತ ಒಟ್ಟು 26197 ವ್ಯಕ್ತಿಗಳನ್ನು ನಿಗಾದಲ್ಲಿಡಲಾಗಿದ್ದು, ಪರೀಕ್ಷಿಸಲಾಗಿರುವ 83806 ಮಾದರಿಗಳ ಪೈಕಿ 673 ಮಾದರಿಗಳು ಖಚಿತಗೊಂಡಿವೆ. ಇಂದು 4613 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಇನ್ನು ಕೋವಿಡ್ ಸೋಂಕಿನ ಅಂಕಿ-ಅಂಶಗಳಲ್ಲಿ ಮಾರ್ಚ್ ತಿಂಗಳಲ್ಲಿ 3ನೇ ಸ್ಥಾನದಲ್ಲಿದ್ದ ಕರ್ನಾಟಕ, ಇಂದು 13ನೇ ಸ್ಥಾನದಲ್ಲಿದೆ. ಶೇ.5.97ರ ರಾಷ್ಟ್ರೀಯ ಸರಾಸರಿಗೆ ಹೋಲಿಸಿದಲ್ಲಿ ರಾಜ್ಯದ ಸರಾಸರಿ ಶೇ.3.13 ಇದೆ ಎಂದು ಅಂದಾಜಿಸಲಾಗಿದೆ.
ಇನ್ನು ಕರ್ನಾಟಕಕ್ಕೆ ವಿದೇಶಗಳಿಂದ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕಕ್ಕೆ ಆಗಮಿಸುತ್ತಿರುವ ಅಂತಾರಾಷ್ಟ್ರೀಯ ಪ್ರಯಾಣಿಕರು ಅನುಸರಿಸಬೇಕಾದ ಮಾರ್ಗಸೂಚಿಗಳ ವಿಸ್ತ್ರತ ಆದೇಶವನ್ನು ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದೆ.