ಬೆಂಗಳೂರು: ರೈತರಿಗೆ ಕೃಷಿಯಲ್ಲಿ ಅನುಕೂಲವಾಗಬೇಕೆಂದರೆ ಹೊಸ ತಂತ್ರಜ್ಞಾನದ ಉಪಕರಣಗಳು ಅತ್ಯಗತ್ಯ. ಆದರೆ ದುಬಾರಿ ಬೆಲೆಯಿಂದಾಗಿ ಇವು ರೈತರಿಗೆ ಕೈಗೆಟುಕದಂತಾಗಿವೆ. ಸರ್ಕಾರದ ಸಬ್ಸಿಡಿ ದರಗಳು ಕೂಡ ಸುಲಭವಾಗಿ ರೈತರಿಗೆ ಸಿಗುತ್ತಿಲ್ಲ. ಈ ಮಧ್ಯೆ ಹೊಸ ಹೊಸ ಉಪಕರಣಗಳು ಮಾರುಕಟ್ಟೆಗಳಿಗೆ ಬರುತ್ತಿವೆ.
ಈ ಬಾರಿಯ ಜಿಕೆವಿಕೆ ಕೃಷಿ ಮೇಳದಲ್ಲಿ ಕಳೆ ಕೀಳಲು ಅಭಿವೃದ್ಧಿಪಡಿಸಿದ ಬ್ರಷ್ ಕಟರ್ ಪ್ರದರ್ಶನ ಮಾಡಲಾಯಿತು. ಈ ಬಗ್ಗೆ ಮಾಹಿತಿ ನೀಡಿದ ವಿಎಸ್ಟಿ ಶಕ್ತಿ ಪವರ್ ಟಿಲ್ಲರ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಸಿಬ್ಬಂದಿ ಶ್ರೀನಿವಾಸಮೂರ್ತಿ, ಒಂದಡಿ ಸಾಲಲ್ಲಿ ಯಂತ್ರಗಳು ಹೋಗಲು, ಸಾಧ್ಯವಾಗದ ಜಾಗದಲ್ಲಿ ಕಳೆ ಕೀಳಲು ಈ ಹೊಸ ಬ್ರೆಷ್ ಕಟರ್ ಅಭಿವೃದ್ಧಿಪಡಿಸಿದ್ದು, ಸುಧಾರಿತ ರೀತಿಯಲ್ಲಿ ಕಳೆಯನ್ನು ತುಂಡು ಮಾಡುವುದಷ್ಟೇ ಅಲ್ಲ ಬುಡಸಮೇತ ಪುಡಿಮಾಡಿ ಹಾಕಲಿದೆ. ಟೊಮ್ಯಾಟೊ, ಮೆಣಸು ಬೆಳೆಗಳ ಕಳೆ ಕೀಳಲು ಇದು ಸಹಕಾರಿ ಎಂದರು.
ವಿಎಸ್ಟಿ ಶಕ್ತಿ ಪವರ್ ಟಿಲ್ಲರ್ ವತಿಯಿಂದ ಎರಡು ಹೊಸ ರೀತಿಯ ಟಿಲ್ಲರ್ ಅಭಿವೃದ್ಧಿಪಡಿಸಲಾಗಿದೆ. ಮೆಸ್ಟ್ರೋ ಎಂಬ ಪವರ್ ವೀಡರ್ ಹಾಗೂ ಏರೋ ಪ್ರೋ ಎಂಬ ಯಂತ್ರ ಸಣ್ಣ ಭೂಮಿ ಇರುವ ರೈತರಿಗೆ ಬಹಳ ಉಪಕಾರಿ. ಈ ಯಂತ್ರದ ಬೆಲೆ 90 ಸಾವಿರ ರೂ. ಇದ್ದು, ಸಬ್ಸಿಡಿಗಾಗಿ ಪ್ರಯತ್ನಿಸುತ್ತಿದ್ದೇವೆ ಎಂದರು.
ಇನ್ನೊಂದೆಡೆ ಬೆಳೆಯ ಕಳೆ ಕೀಳಲು ಹೊಸ ಯಂತ್ರ ಬಂದಿದೆ. ಮೇಳಕ್ಕೆ ಬಂದಿದ್ದ ಕೃಷಿಕರೊಬ್ಬರು ಮಾತನಾಡಿ, ಯಂತ್ರಗಳ ಬೆಲೆ ದುಬಾರಿಯಾಗಿದೆ. ಸರ್ಕಾರ ಶೇ. 50ರಷ್ಟು ಸಬ್ಸಿಡಿ ಕೊಟ್ಟರೆ ಎಲ್ಲಾ ತಾಲೂಕಿಗೆ ತಲುಪುವ ಹಾಗೆ ಮಾಡಬೇಕಿದೆ ಎಂದರು. ಇನ್ನು ಹಾಸನ ಜಿಲ್ಲೆಯಿಂದ ಬಂದ ರೈತ ಡಿಸಿ ಕಾಂತರಾಜು ಮಾತನಾಡಿ, ಸಬ್ಸಿಡಿ ಮಾಹಿತಿ, ಹೊಸ ಟ್ರ್ಯಾಕ್ಟರ್, ಟಿಲ್ಲರ್ ಮಾಹಿತಿ ಪಡೆದೆವು. ಇದು ರೈತರಿಗೆ ಅನುಕೂಲವಾಗಿದೆ ಎಂದರು.