ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸದ್ಯ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಜೈಲು ಸೇರಿರುವ ಪರಪ್ಪನ ಅಗ್ರಹಾರದ ಕೈದಿಗಳಿಗೂ ಸೋಂಕು ವಕ್ಕರಿಸಿದೆ.
ಪರಪ್ಪನ ಅಗ್ರಹಾರದಲ್ಲಿರುವ ಒಟ್ಟು 22 ವಿಚಾರಣಾಧೀನ ಕೈದಿಗಳಲ್ಲಿ ಸೋಂಕು ದೃಢವಾಗಿದ್ದು, ಸೋಂಕಿತ ಆರೋಪಿಗಳಿಗೆ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಇರಲಿಲ್ಲ. ಆದರೆ ರ್ಯಾಂಡಮ್ ಪರೀಕ್ಷೆ ವೇಳೆ ಸೋಂಕು ದೃಢಗೊಂಡ ಹಿನ್ನೆಲೆ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಜೈಲನ್ನು ಸ್ಯಾನಿಟೈಸ್ ಮಾಡಲಾಗಿದೆ.
ಹಾಗೆಯೇ ಹೊಸದಾಗಿ ಬಂದ ಆರೋಪಿಗಳಿಗೆ ಮೂರು ಹಂತದಲ್ಲಿ ಅಂದ್ರೆ 12 ದಿನ, 14 ದಿನ, 22 ದಿನದಂತೆ ಕ್ವಾರಂಟೈನ್ ಮಾಡಿದ ನಂತರ ಸೋಂಕು ಇಲ್ಲದೆ ಇದ್ರೆ ಮಾತ್ರ ಇತರೆ ಕೈದಿಗಳ ಜೊತೆ ಇರಲು ಅವಕಾಶ ಮಾಡಿಕೊಡಲಿದ್ದಾರೆ. ಸದ್ಯ ಮೊದಲ ಬಾರಿ ಸೋಂಕು ಹರಡಿದ್ದು, ಹೀಗಾಗಿ ಬಂದಿಖಾನೆ ಇಲಾಖೆ ಡಿಜಿಪಿ ಅಲೋಕ್ ಮೋಹನ್, ಆದಷ್ಟು ಜಾಗ್ರತೆಯಿಂದ ಇರುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ.
ಸದ್ಯ ಪರಪ್ಪನ ಅಗ್ರಹಾರದಲ್ಲಿ ಸುಮಾರು 5 ಸಾವಿರ ಕೈದಿಗಳಿದ್ದಾರೆ. ಒಂದು ವೇಳೆ ಕೊಂಚ ಯಾಮಾರಿ ನಿರ್ಲಕ್ಷ್ಯ ವಹಿಸಿದರೂ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲ್ಲಾ ಬ್ಯಾರಕ್ ಬಳಿ ಮುಂಜಾಗ್ರತಾ ಕ್ರಮವನ್ನು ಜೈಲು ಸಿಬ್ಬಂದಿ ಕೈಗೊಂಡಿದ್ದಾರೆ. ಮತ್ತೊಂದೆಡೆ ಫ್ರೀಡಂ ಪಾರ್ಕ್ ಬಳಿ ಇರುವ ಪ್ರಮುಖ ಜೈಲು ಅಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಕೂಡ ಕೊರೊನಾ ದೃಢವಾಗಿದೆ.