ಬೆಂಗಳೂರು: ಕಲಬುರಗಿಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಸಂಪರ್ಕದಲ್ಲಿ ಇದ್ದ ಇಬ್ಬರು ಹಾಗೂ ವಿದೇಶದಿಂದ ಬಂದಿರುವ ಇಬ್ಬರು ಸೇರಿ ನಾಲ್ವರಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ಇದ್ದು, ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ತಿಳಿಸಿದ್ದಾರೆ.
ಉಪ ಮುಖ್ಯಂತ್ರಿ ಗೋವಿಂದ ಕಾರಜೋಳ ಜೊತೆ ವಿಡಿಯೋ ಸಂವಾದ ನಡೆಸಿದ ಅವರು, ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ಜಾತ್ರೆಗಳಿಗೆ ನಿರ್ಬಂಧ, ಮದ್ಯ ಮಾರಾಟ ಬ್ಯಾನ್, ಮದುವೆಗೆ ಕುಟುಂಬ ವರ್ಗದವರು ಮಾತ್ರ ಇರಬೇಕು ಸೇರಿದಂತೆ ಹೆಚ್ಚು ಜನ ಒಂದು ಕಡೆ ಸೇರದ ರೀತಿ ಕ್ರಮ ಕೈಗೊಳ್ಳಲಾಗಿದೆ. ಅಘೋಷಿತ ಬಂದ್ ವಾತಾವರಣ ಇದೆ. ಇನ್ನಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತ ವ್ಯಕ್ತಿಯ ಜೊತೆ ಮೊದಲ ಹಂತದಲ್ಲಿ ಸಂಪರ್ಕ ಹೊಂದಿದ್ದ 71 ಜನ, ಎರಡನೇ ಹಂತದ ಸಂಪರ್ಕ ಹೊಂದಿದ್ದ 238 ಜನ ಸೇರಿ ಒಟ್ಟು 308 ಜನರನ್ನು ಪತ್ತೆ ಮಾಡಿದ್ದೇವೆ. ಇವರಲ್ಲಿ ಇಬ್ಬರಿಗೆ ಸೋಂಕು ಬಾಧಿಸಿರುವ ಶಂಕೆಯಿದ್ದು, ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ. ಮೂವರು ವಿದೇಶಿಯರು ನೇರವಾಗಿ ಮೃತ ವ್ಯಕ್ತಿಯ ಗ್ರಾಮಕ್ಕೆ ಹೋದ ಕುರಿತು ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆ ಅವರ ಬಗ್ಗೆ ಮಾಹಿತಿ ಕಲೆಹಾಕಿದ್ದೇವೆ. ಅವರಲ್ಲಿ ಇಬ್ಬರರಿಗೆ ಸೋಂಕು ಬಾಧಿಸಿರುವ ಶಂಕೆಯಿದ್ದು, ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ. ಒಟ್ಟು ನಾಲ್ಕು ಪರೀಕ್ಷಾ ವರದಿ ನಿರೀಕ್ಷೆಯಲ್ಲಿದ್ದೇವೆ ಎಂದರು.
ಶಾಲೆ, ಶಾಪಿಂಗ್ ಮಾಲ್ ಬಂದ್ ಮಾಡಲಾಗಿದೆ. ಮಾಧ್ಯಮದವರು ಮೊದಲ ಹಂತದ ಸಂಪರ್ಕದವರ ಸಂದರ್ಶನ ಮಾಡಿದ್ದು, ಅದರಲ್ಲಿ ನಾಲ್ವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ವಿಮಾನ ನಿಲ್ದಾಣ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆ ವೈದ್ಯರ ಜೊತೆ ಮಾತುಕತೆ ನಡೆಸಿದ್ದೇವೆ. ವೈದ್ಯಕೀಯ ಕಾಲೇಜುಗಳ ಜೊತೆಯೂ ಮಾತುಕತೆ ನಡೆಸಿದ್ದೇವೆ. ದುಬಾರಿ ಬೆಲೆಗೆ ಮಾಸ್ಕ್ ಮಾರಾಟಕ್ಕೆ ಕಡಿವಾಣ ಹಾಕಲು ಈಗಾಗಲೇ ಔಷದ ಮಳಿಗೆಗಳ ಮೇಲೆ ದಾಳಿ ಮಾಡಿದ್ದೇವೆ. ಮಾಸ್ಕ್, ಗ್ಲೌಸ್ ಇತ್ಯಾದಿ ದಾಸ್ತಾನು ಪರಿಶೀಲನೆ ನಡೆಸಿದ್ದೇವೆ. ಅಲ್ಲದೆ ನಾವೇ ಖರೀದಿಸಿ ಪೂರೈಕೆ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಹೈದರಾಬಾದ್, ಮುಂಬೈ ವಿಮಾನ ನಿಲ್ದಾಣಗಳ ಮೂಲಕ ವಿದೇಶದಿಂದ ಬರುವವರ ಮಾಹಿತಿ ಸಿಗುತ್ತಿಲ್ಲ. ಸ್ಥಳೀಯರು ಮಾಹಿತಿ ನೀಡಿದಾಗಲೇ ನಮಗೆ ಗೊತ್ತಾಗುತ್ತಿದೆ. ನೇರವಾಗಿ ಗೊತ್ತಾದರೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಡಿಸಿಎಂಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿಸಿಎಂ ಗೋವಿಂದ ಕಾರಜೋಳ, ವಿದೇಶದಿಂದ ಬರುವವರ ಮಾಹಿತಿಯನ್ನು ಗಡಿ ಜಿಲ್ಲೆಗಳಿಗೆ ಸರ್ಕಾರದ ಮೂಲಕ ಒದಗಿಸಲು ಪ್ರಯತ್ನ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ದತ್ತಾತ್ರೇಯ ದೇವಸ್ಥಾನಕ್ಕೆ ಜನ ಜಾಸ್ತಿ ಹೋಗುತ್ತಾರೆ. ತಹಶೀಲ್ದಾರ್‌ಗೆ ಸೂಚನೆ ನೀಡಿ ನಿಯಂತ್ರಿಸಿ. ಅದೇ ರೀತಿ ಶ್ರೀಶೈಲಕ್ಕೆ ಹೋಗುವವರನ್ನು ತಡೆಯಿರಿ. ಆಸ್ಪತ್ರೆಗಳಲ್ಲಿ 24X7 ಕೆಲಸ ಮಾಡಲು ಸೂಚಿಸಿ. ಮೂರು ಶಿಫ್ಟ್ನಲ್ಲಿ ಅಲರ್ಟ್ ಆಗಿರಬೇಕು. ಹೋಂ ಸ್ಟೇ ಇದ್ದರೆ ಅಲ್ಲಿಯೂ ಪರಿಶೀಲನೆ ನಡೆಸಿ. ವಸತಿ ಶಾಲೆ ಮಕ್ಕಳನ್ನು ಮನೆಗೆ ಕಳಿಸಿ. ಪ್ರತಿ ದಿನ ಮೂರು ಬಾರಿ ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿ. ಅಗತ್ಯ ವಸ್ತುಗಳ ಲಭ್ಯತೆಯಲ್ಲಿ ತೊಂದರೆಯಾಗಬಾರದು. ಕುಡಿಯುವ ನೀರಿನ ಪೂರೈಕೆ ಪರಿಶೀಲಿಸಿ ಎಂದು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.