ಬೆಂಗಳೂರು: ಅಪಘಾತಗಳ ತಡೆಗೆ ರಸ್ತೆಗಳ ಬದಿ ಎದುರಾಗುವ ಕಂದಕ, ಕೆರೆ ಏರಿ, ತಿರುವು, ಸೇತುವೆಗಳಿಗೆ ತಡೆಗೋಡೆ ನಿರ್ಮಿಸುವುದು ಕಡ್ಡಾಯ. ಆದರೆ, ರಾಜ್ಯದ ಎಷ್ಟೋ ಕಡೆ ತಡೆಗೋಡೆಗಳು ಇಲ್ಲದ ಕಾರಣ ಕಂದಕಗಳು, ಸೇತುವೆಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಇತ್ತ ಹಾಳಾಗಿರುವ ತಡೆಗೋಡೆಗಳ ದುರಸ್ತಿಗೂ ಅಧಿಕಾರಿಗಳು ಮುಂದಾಗುತ್ತಿಲ್ಲ.
ಕೊಪ್ಪಳ ಜಿಲ್ಲೆಯಲ್ಲಿ ಮೂರು ರಾಷ್ಟ್ರೀಯ ಹಾಗೂ ಒಂದು ರಾಜ್ಯ ಹೆದ್ದಾರಿ ಹಾದು ಹೋಗಿದೆ. ಹೆದ್ದಾರಿಗಳ ಪಕ್ಕದಲ್ಲಿ ಕಂದಕಗಳ ಜೊತೆಗೆ ಹಳ್ಳಗಳೂ ಇವೆ. ಅಲ್ಲಿ ಸೇತುವೆಗಳ ಜೊತೆಗೆ ತಡೆಗೋಡೆಗಳನ್ನೂ ನಿರ್ಮಿಸಲಾಗಿದೆ. ಹೀಗಾಗಿ, ಅಪಘಾತಕ್ಕೆ ಒಳಗಾದವರ ಸಂಖ್ಯೆ ಕಡಿಮೆ ಎನ್ನಲಾಗಿದೆ. ಒಂದು ವೇಳೆ ಅಂತಹ ಘಟನೆಗಳು ಸಂಭವಿಸಿದ್ದೇ ಆದರೆ, ಸವಾರರ ನಿರ್ಲಕ್ಷ್ಯದಿಂದ ಮಾತ್ರ ಎಂದು ಹೇಳಲಾಗುತ್ತಿದೆ.
ಹೆದ್ದಾರಿಗಳ ಬದಿಯಲ್ಲಿ ಈ ಸೌಲಭ್ಯ ಅಲ್ಲಲ್ಲಿ ಕಂಡು ಬಂದರೂ ಗ್ರಾಮೀಣ ಪ್ರದೇಶಗಳ ರಸ್ತೆಗಳಲ್ಲಂತೂ ಕಾಣ ಸಿಗುವುದೇ ಇಲ್ಲ. ಕಂದಕಗಳು, ಹಳ್ಳಗಳ ಬಳಿ ಯಾವುದೇ ತಡೆಗೋಡೆಗಳನ್ನು ನಿರ್ಮಿಸಿಲ್ಲ. ಹಾಗಾದ್ರೆ ತಡೆಗೋಡೆ ನಿರ್ಮಿಸಲು ಬಿಡುಗಡೆಯಾಗುವ ಅನುದಾನ ಎಲ್ಲಿ ಹೋಗುತ್ತದೆ. ಅಧಿಕಾರಿಗಳಿಗೆ ಜನರ ಪ್ರಾಣ ಎಂದರೆ ಇಷ್ಟೊಂದು ನಿರ್ಲಕ್ಷ್ಯವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ದಾವಣಗೆರೆಯ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಹೆಸರಿಗೆ ಮಾತ್ರ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಆ ಕಾಮಗಾರಿ ಬೇಕಾಬಿಟ್ಟಿ ಎಂದರೂ ತಪ್ಪಾಗಲ್ಲ. ನಗರದ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗಷ್ಟೇ ತಡೆಗೋಡೆ ಇಲ್ಲದೆ ಕಾರು ಉರುಳಿ ಬಿದ್ದಿದ್ದು, ಪ್ರಾಣ ಹಾನಿ ಸಂಭವಿಸಿದೆ. ಇಂತಹ ಪ್ರಕರಣಗಳ ತಡೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಒತ್ತಾಯವಾಗಿದೆ. ತಡೆಗೋಡೆ ನಿರ್ಮಿಸುವುದು ಮತ್ತು ಅರ್ಧಕ್ಕೆ ಕೈ ಬಿಟ್ಟಿರುವ ಕಾಮಗಾರಿಗಳನ್ನು ಬೇಗನೇ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕಾಗಿದೆ.