ಬೆಂಗಳೂರು: ಡೇಟಿಂಗ್ ಆಸೆಗೆ ಬಿದ್ದ ಯುವಕನೊಬ್ಬನಿಗೆ ಸೈಬರ್ ಖದೀಮರು ಮೋಸ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ವೈಟ್ ಫೀಲ್ಡ್ ನಿವಾಸಿ 27 ವರ್ಷದ ಯುವಕ ಡೇಟಿಂಗ್ ಆ್ಯಪ್ ಸರ್ಚ್ ಮಾಡುತ್ತಿರುವಾಗ ಆನ್ಲೈನ್ನಲ್ಲಿ ಪರಿಚಯವಾದ ವ್ಯಕ್ತಿಯೋರ್ವ ಡೇಟಿಂಗ್ ಸರ್ವೀಸ್ಗಾಗಿ ಸಂಪರ್ಕ ಮಾಡಿದ್ದಾನೆ. ಬಳಿಕ ಓರ್ವ ಸುಂದರ ಯುವತಿಯನ್ನು ಕಳುಹಿಸುವುದಾಗಿ ಯುವತಿಯೊಬ್ಬಳ ಫೋಟೋ ಕಳುಹಿಸಿದ್ದ. ಯುವತಿಯನ್ನು ನೋಡಿದ ಯುವಕ ಆಕೆಯ ಜೊತೆ ಡೇಟಿಂಗ್ ಮಾಡಲು ಒಪ್ಪಿದ್ದ. ಇದೇ ಸರಿಯಾದ ಸಮಯ ಅಂದುಕೊಂಡ ಆರೋಪಿ, ಡೇಟಿಂಗ್ಗಿಂತ ಮೊದಲು ಹಣ ಪಾವತಿಸುವಂತೆ ತಿಳಿಸಿ ಗೂಗಲ್ ಪೇ ನಂಬರ್ ಕಳುಹಿಸಿದ್ದ. ಡೇಟಿಂಗ್ ಆಸೆಗೆ ಬಿದ್ದ ಯುವಕ ಹಂತ ಹಂತವಾಗಿ ಒಟ್ಟು 99,700 ರೂ. ಹಣವನ್ನು ಅಪರಿಚಿತ ವ್ಯಕ್ತಿಯ ಖಾತೆಗೆ ಹಾಕಿದ್ದ. ಆದರೆ ಹಣ ಪಡೆದುಕೊಂಡ ಅಪರಿಚಿತ ವ್ಯಕ್ತಿ ಯವಕನಿಗೆ ವಂಚಿಸಿದ್ದಾನೆ. ಇತ್ತ ಹಣವನ್ನು ಕಳೆದುಕೊಂಡ ಯುವಕ ಕಂಗಾಲಾಗಿ ಬೆಂಗಳೂರಿನ ಸೌತ್ ಸಿಐಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ನಗರದಲ್ಲಿ ಇತ್ತೀಚೆಗೆ ಬಹುತೇಕ ಯುವಕ, ಯುವತಿಯರು ಹೆಚ್ಚಾಗಿ ಆನ್ಲೈನ್ ವಹಿವಾಟು ಮಾಡುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಸೈಬರ್ ಖದೀಮರು ಈ ರೀತಿ ಹಣ ದೋಚುವುದನ್ನೇ ದಂಧೆ ಮಾಡಿಕೊಂಡಿದ್ದಾರೆ.