ಬೆಂಗಳೂರು: ಕೊರೊನಾದಿಂದ ಕಂಗೆಟ್ಟಿದ್ದ ಪ್ರವಾಸಿ ಮಾಲೀಕರಿಗೆ ಹೊಸ ಕೋವಿಡ್ ಮಾರ್ಗಸೂಚಿ ಇನ್ನಷ್ಟು ಆಘಾತ ತಂದಿದೆ ಎಂದು ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಹೇಳಿದ್ದಾರೆ.
ಇಡೀ ವಿಶ್ವವನ್ನೇ ಕಾಡಿರುವ ಮಹಾಮಾರಿ ರಾಜ್ಯದಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿದೆ. ಮಾರ್ಚ್ ತಿಂಗಳಿಂದ ವಿಧಿಸಲಾದ ಲಾಕ್ಡೌನ್ನಿಂದಾಗಿ ನಾಲ್ಕಾರು ತಿಂಗಳು ಯಾವುದೇ ಕೆಲಸ ಇಲ್ಲದೆ ಪ್ರವಾಸಿ ವಾಹನ ಮಾಲೀಕರು ಹಾಗೂ ಚಾಲಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಲವರ ಬದುಕು ಬೀದಿಗೆ ಬಂದಿದೆ. ಇಡೀ ಸಮುದಾಯಕ್ಕೆ ಸಮಸ್ಯೆ ಎದುರಾಗಿ ಇರುವಾಗ ಎಲ್ಲರಂತೆ ನಾವು ಎಂದುಕೊಂಡು ಒಂದಿಷ್ಟು ಕಾಲ ಸುಮ್ಮನಿದ್ದೆವು. ಆದರೆ ಸರ್ಕಾರ ಒಂದೊಂದೇ ಕ್ಷೇತ್ರದ ನಿಯಮಾವಳಿಗಳನ್ನು ಸಡಿಲಿಸುತ್ತಾ ಸಾಗಿದೆ.
ಅಕ್ಕಪಕ್ಕದ ರಾಜ್ಯಗಳಿಗೆ ತೆರಳುವ ಕಾರ್ಯಕ್ಕೆ ಹೇರಿರುವ ನಿರ್ಬಂಧ ಒಂದು ಹಂತದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಹಾಗೂ ಅದನ್ನು ಅವಲಂಬಿಸಿರುವ ಪ್ರವಾಸಿ ವಾಹನ ವ್ಯವಸ್ಥೆಯನ್ನು ಸಂಪೂರ್ಣ ಬುಡಮೇಲು ಮಾಡಿದೆ. ಇದೀಗ ಒಂದಿಷ್ಟು ನಿರಾಳತೆ ಸಿಕ್ಕ ನಂತರವಾದರೂ ಉಸಿರಾಡುವ ವಾತಾವರಣ ಲಭಿಸುವುದೆಂದು ನಿರೀಕ್ಷಿಸಿದ್ದ ನಮಗೆ ನಿರಾಸೆ ಉಂಟಾಗಿದೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನದಿಂದ ದಿನಕ್ಕೆ ನಮ್ಮ ಸಂಕಷ್ಟ ಹೆಚ್ಚಾಗುತ್ತಲೇ ಇದ್ದು, ಒಂದೆಡೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕಾರ್ಯಾರಂಭ ಮಾಡುತ್ತಿಲ್ಲ. ಸಾಫ್ಟ್ವೇರ್ ಕಂಪನಿಗಳು, ಎಂಎನ್ಸಿ ಕಂಪನಿಗಳು ಕಾರ್ಯನಿರ್ವಹಣೆ ಆರಂಭಿಸುತ್ತಿಲ್ಲ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಯಾವುದೇ ಪ್ರಗತಿ ಕಾಣದೆ ಕಂಗೆಡುವ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ರಾಜ್ಯದ ಜನಪ್ರಿಯ ಆಚರಣೆಯಾದ ದಸರಾ ಸಂದರ್ಭ ಒಂದಿಷ್ಟು ಆರ್ಥಿಕ ಅನುಕೂಲ ಸಾಧಿಸಿಕೊಳ್ಳುವ ನಮ್ಮ ಪ್ರಯತ್ನಕ್ಕೆ ಕೋವಿಡ್ ಮಾರ್ಗಸೂಚಿ ಸಂಪೂರ್ಣ ತಣ್ಣೀರೆರಚಿದೆ.
ರಾಜ್ಯದ ಮೈಸೂರು ಹಾಗೂ ಮಡಿಕೇರಿ ಮತ್ತಿತರ ಪಾರಂಪರಿಕ ತಾಣಗಳಿಗೆ ದಸರಾ ಹಾಗೂ ದೀಪಾವಳಿ ಸೇರಿದಂತೆ ಇತರೆ ಆಚರಣೆ ನಡೆಯುವ ಸಂದರ್ಭದಲ್ಲಿ ಪ್ರವಾಸಿಗರನ್ನು ಕೊಂಡೊಯ್ಯಬಹುದು ಎಂಬ ನಿರೀಕ್ಷೆ ಹೊಸ ಮಾರ್ಗಸೂಚಿ ಬಿಡುಗಡೆಯಿಂದ ಹುಸಿಯಾಗಿದೆ. ಕಳೆದ ಕೆಲ ತಿಂಗಳಿಂದ ಮಕ್ಕಳೊಂದಿಗೆ ಮನೆಯಲ್ಲೇ ಬಂಧಿಯಾಗಿರುವ ನಾಗರಿಕರು ಈ ಹಬ್ಬದ ಸಂದರ್ಭ ಒಂದಿಷ್ಟು ಹೊರಗಡೆ ಸಂಚರಿಸುವ ಆಶಯ ಹೊಂದಿದ್ದರು. ಆದರೆ ಇದೀಗ ಸರ್ಕಾರದಿಂದ ಹೊಸ ಕೋವಿಡ್ ಮಾರ್ಗಸೂಚಿ ಬಿಡುಗಡೆಯಾಗಿದ್ದು, ಮಾರ್ಗಸೂಚಿಯಲ್ಲಿ ಒಂದಿಷ್ಟು ನಿರ್ಬಂಧ ಹೇರುವ ಮೂಲಕ ಪ್ರವಾಸೋದ್ಯಮಕ್ಕೆ ಮುಕ್ತ ಅವಕಾಶ ಇಲ್ಲದಂತೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಆಯಾಯ ಇಲಾಖೆ ಅವರವರ ಕೆಲಸ ಮಾಡಬೇಕಾಗಿದೆ. ಇಲ್ಲಿ ಬೇರೆ ಯಾವುದೇ ಹಸ್ತಕ್ಷೇಪ ಇಲ್ಲದಂತೆ ಮಾಡಬೇಕಾಗಿದೆ. ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮದೊಂದಿಗೆ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಪ್ರವಾಸ ಕಾರ್ಯಕ್ರಮ ಕೈಗೊಳ್ಳುವ ಅವಕಾಶಕ್ಕೆ ಅನುವು ಮಾಡಿಕೊಡಬೇಕಾಗಿದೆ. ಇದರಿಂದಾಗಿ ಮೊದಲೇ ಸಂಕಷ್ಟದಲ್ಲಿರುವ ವಾಹನ ಮಾಲೀಕರು ಹಾಗೂ ಚಾಲಕರ ಬದುಕು ಒಂದಿಷ್ಟು ಹಸನಾಗಲಿದೆ.
ಆದರೆ ಅದರ ಬದಲು ಜನರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ, ಮೊದಲೇ ಸಂಕಷ್ಟದಲ್ಲಿರುವ ವಾಹನ ಚಾಲಕ-ಮಾಲೀಕರ ದುಡಿಯುವ ಅವಕಾಶ ಕಿತ್ತು ಹಾಕುವಂತಹ ಸುತ್ತೋಲೆ ಹೊರಡಿಸಿರುವುದು ಖಂಡನೀಯ. ದೇಶಕ್ಕೆ ಎಂಟು ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮನ್ನಣೆ ಸಿಕ್ಕಂತಹ ಈ ಸಂದರ್ಭದಲ್ಲಿ ವಿಶ್ವವಿಖ್ಯಾತ ದಸರಾಗೆ ಸಾಧ್ಯವಾದಷ್ಟು ಮಟ್ಟಿಗೆ ಇನ್ನಷ್ಟು ಅನುಕೂಲ ಮಾಡಿಕೊಡುವ ಪ್ರಯತ್ನವನ್ನು ಸರ್ಕಾರ ಮಾಡಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.