ಬೆಂಗಳೂರು: ಕೊರೊನಾದಿಂದ ಭಯಭೀತವಾಗಿರುವ ಜನತೆಗೆ ಧೈರ್ಯ ತುಂಬುವ ಸಲುವಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ರವರು ದೂರದರ್ಶನಲ್ಲಿ ಫೋನ್ ಇನ್ ಕಾರ್ಯಕ್ರಮ ನಿಗದಿ ಮಾಡಿದ್ದರು. ಆದರೆ ಅಲ್ಲಿನ ಕ್ಯಾಮೆರಾ ಮ್ಯಾನ್ಗೆ ಕೊರೊನಾ ಸೋಂಕು ತಗುಲಿರುವ ಕಾರಣ ಕಾರ್ಯಕ್ರಮವನ್ನು ಮೊಟಕುಗೊಳಿಸಲಾಗಿದೆ.
ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಇದರಿಂದ ಧೃತಿಗೆಟ್ಟಿರುವ ಜನರಿಗೆ ಧೈರ್ಯ ತುಂಬುವ ಉದ್ದೇಶದಿಂದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಜನರಿಗೆ ಕರೆ ಮಾಡಿ ಆರೋಗ್ಯ ಹಾಗೂ ಕುಟುಂಬದ ಸಮಸ್ಯೆಗಳ ಕುರಿತು ವಿಚಾರಣೆಗೆ ಮುಂದಾಗಿದ್ದರು. ಹೀಗಾಗಿ ಸರ್ಕಾರಿ ವಾಹಿನಿ ದೂರದರ್ಶನದಲ್ಲಿ ಫೋನ್ ಇನ್ ಕಾರ್ಯಕ್ರಮ ಬುಧವಾರ ನಿಗದಿಯಾಗಿತ್ತು. ಆದರೆ ದೂರದರ್ಶನದ ಕ್ಯಾಮೆರಾ ಮ್ಯಾನ್ಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಪೋನ್ ಇನ್ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.
ಸೋಂಕು ತಗುಲಿರುವ ವ್ಯಕ್ತಿ, ಇತ್ತೀಚಿಗೆ ತಾಯಿಯ ಆರೋಗ್ಯ ವಿಚಾರಿಸಲೆಂದು ಚೆನ್ನೈಗೆ ತೆರಳಿದ್ದರು. ಈ ವೇಳೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನು ಇವರ ಸಂಪರ್ಕದಲ್ಲಿದ್ದ ಸಹೋದ್ಯೋಗಿಗಳಲ್ಲಿ ಆತಂಕ ಮನೆ ಮಾಡಿದೆ.
ಕೆ.ಆರ್.ಪುರಂ ನಿವಾಸಿಯಾಗಿರುವ ಕ್ಯಾಮೆರಾ ಮ್ಯಾನ್ ಚಂಡೀಗಢ ದೂರದರ್ಶನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಪ್ರಧಾನ ಕಚೇರಿ ಬೆಂಗಳೂರಿನಲ್ಲಿರುವ ಕಾರಣ ಇಲ್ಲಿಗೆ ಭೇಟಿ ನೀಡಿದ್ದರು ಎನ್ನಲಾಗುತ್ತಿದೆ.