ಬೆಂಗಳೂರು: ಕೊರೊನಾ ಭೀತಿಯಲ್ಲಿ ಇಡೀ ಜಗತ್ತು ತಲ್ಲಣಗೊಂಡಿದೆ. ಈ ಮಹಾಮಾರಿಯಿಂದ ಹೊರಬರಲು ವೈದ್ಯಕೀಯ ಕ್ಷೇತ್ರದಲ್ಲಿ ಲಸಿಕೆಯ ಸಂಶೋಧನೆಗೆ ಇನ್ನಿಲ್ಲದ ಕಸರತ್ತು ಆರಂಭವಾಗಿದೆ. ಅಲ್ಲದೆ ಆಯುರ್ವೇದದಲ್ಲೂ ಕೊರೊನಾಗೆ ಪರಿಹಾರ ಕಂಡುಹಿಡಿಯಲು ಪ್ರತಿನಿತ್ಯ ಹೊಸ ಸಂಶೋಧನೆ ನಡೆಸಲಾಗುತ್ತಿದೆ. ವಿಶ್ವದ ಬಲಾಢ್ಯ ದೇಶಗಳೇ ಕೊರೊನಾ ಲಸಿಕೆಯ ದಾರಿಯಲ್ಲಿ ಮುನ್ನುಗ್ಗುತ್ತಿವೆ.
ಬೆಂಗಳೂರಿನ ಸಂಸ್ಥೆಯೊಂದು ಸಸ್ಯಾಧಾರಿತ ಔಷಧಿ ಅಭಿವೃದ್ಧಿಪಡಿಸಿದೆ. ಸದ್ಯದಲ್ಲೇ ಇದು ಜನರ ಕೈಸೇರುವ ವಿಶ್ವಾಸ ವ್ಯಕ್ತಪಡಿಸಿದೆ. ಇಲ್ಲಿನ ಅಟ್ರಿಮೆಡ್ ಸಂಸ್ಥೆ ಕೊರೊನಾ ಸೋಂಕಿನ ಪರಿಹಾರಕ್ಕೆ ಮಾತ್ರೆಯನ್ನು ಹೊರತರಲು ಮುಂದಾಗಿದೆ. ಈ ಕುರಿತ ಎಕ್ಸ್ಕ್ಲೂಸಿವ್ ವರದಿ ಇಲ್ಲಿದೆ.
ಈಗಾಗಲೇ ಚಾಲ್ತಿಯಲ್ಲಿರುವ ರೆಂಡಿಸಿವರ್ ಔಷಧಿಯಷ್ಟೇ ಸೋಂಕು ನಾಶ ಮಾಡುವ ಶಕ್ತಿ ಈ ಮಾತ್ರೆಗಳಿಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಹೃಷಿಕೇಶ್ ದಾಮ್ಲೆ 'ಈಟಿವಿ ಭಾರತ' ದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಔಷಧಿ ಪ್ರಾಥಮಿಕ ಹಂತದ ಪರೀಕ್ಷೆಯಲ್ಲಿ ಫರಿದಾಬಾದ್ನ ಕೇಂದ್ರ ಸರ್ಕಾರದ ಪ್ರಾದೇಶಿಕ ಜೈವಿಕ ತಂತ್ರಜ್ಞಾನ ಕೇಂದ್ರದಲ್ಲಿ ಪರೀಕ್ಷಿಸಲ್ಪಟ್ಟಿದ್ದು, ಸಂಸ್ಥೆ ಕಳುಹಿಸಿದ್ದ 10 ಸಸ್ಯಗಳ ಪೈಕಿ 3 ಸಸ್ಯಗಳು ಕೊರೊನಾ ವೈರಸ್ ನಾಶಪಡಿಸುವ ಸಾಮರ್ಥ್ಯ ಹೊಂದಿವೆ ಎಂದು ಆರ್ಸಿಬಿ ಕೇಂದ್ರ ತಿಳಿಸಿದೆ ಎಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಸಸ್ಯಾಧಾರಿತ ಮಾತ್ರೆಯ ಮುಂದಿನ ಹೆಜ್ಜೆ ಏನು?ಡಾ.ಹೃಷಿಕೇಶ್ ದಾಮ್ಲೆ: ಮಾತ್ರೆಯ ಅಧ್ಯಯನಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗಲಿದ್ದು, ಪ್ರತಿ ಮಾತ್ರೆಯ ಅಂದಾಜು ಬೆಲೆ 30 ರೂಪಾಯಿ ಆಗಲಿದೆ. ಎಲ್ಲಾ ಕಡೆಗಳಲ್ಲೂ ದೊರೆಯುವಂತೆ ಮಾಡಲಾಗುವುದು.
ಸಸ್ಯದ ಹೆಸರು ಬಹಿರಂಗ ಪಡಿಸದ ಕಾರಣ?
ಡಾ.ಹೃಷಿಕೇಶ್ ದಾಮ್ಲೆ: ಕೋಟ್ಯಂತರ ರೂಪಾಯಿ ಹಣ ಹಾಗೂ ಸಮಯ ಇದಕ್ಕಾಗಿ ಮಿಸಲಿಟ್ಟಿದ್ದು, ಇನ್ನು ಇದಕ್ಕೆ ಪೇಟೆಂಟ್ ಮಾಡಿಸಬೇಕಿದೆ. ಪೇಟೆಂಟ್ ಅರ್ಜಿಯನ್ನು ನೀಡಿದ ಕೂಡಲೇ ಸಸ್ಯಗಳ ಹೆಸರನ್ನು ಬಹಿರಂಗ ಪಡಿಸಲಾಗುವುದು. ಇದರ ಜೊತೆಗೆ ಜನರು ಇದನ್ನು ಬಳಸಲು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.
ನಿಮ್ಮ ಆವಿಷ್ಕಾರದ ಮಾತ್ರೆಯಲ್ಲಿ ದುಷ್ಪರಿಣಾಮ ಇದೆಯಾ?
ಡಾ.ಹೃಷಿಕೇಶ್ ದಾಮ್ಲೆ: ನಿಗದಿಯಾಗಿರುವ 3 ಸಸ್ಯಗಳು ಭಾರತದಲ್ಲಿ 3,000 ವರ್ಷಗಳಿಂದ ಬಳಕೆಯಲ್ಲಿವೆ ಹಾಗೂ ಇದರ ಮೇಲೆ ಸಾಕಷ್ಟು ಅಧ್ಯಯನ ನಡೆದಿದ್ದು, ಈವರೆಗೂ ಯಾವುದೇ ದುಷ್ಪರಿಣಾಮ ಕಂಡುಬಂದಿಲ್ಲ.
ರೆಂಡಿಸಿವರ್ ಔಷಧಿ ಇರುವಾಗ ಮತ್ತೊಂದು ಔಷಧಿ ಅಗತ್ಯವೇನು?
ಡಾ.ಹೃಷಿಕೇಶ್ ದಾಮ್ಲೆ: ರೆಂಡಿಸಿವರ್ ಔಷಧಿ ಇಂಜೆಕ್ಟ್ ಮಾಡಬೇಕು, ಅದಕ್ಕೆ ವೈದ್ಯಕೀಯ ಸೌಲಭ್ಯ ಬೇಕಿದೆ. ಹಾಗೂ ಇದಕ್ಕೆ 30 ಸಾವಿರದಿಂದ 50 ಸಾವಿರ ರೂಪಾಯಿವರೆಗೂ ಹಣ ಆಗಲಿದೆ. ನಾವು ಆವಿಷ್ಕಾರ ಮಾಡಿದ ಔಷಧಿ ಕಡಿಮೆ ಬೆಲೆಯ ಜೊತೆಗೆ ಮನೆಯಲ್ಲಿ ಯಾವುದೇ ವೈದ್ಯಕೀಯ ಸಿಬ್ಬಂದಿಯ ಸಹಾಯವಿಲ್ಲದೆ ಸೇವಿಸುವಂಥದ್ದು. ರೆಂಡಿಸಿವರ್ ಇಂಜೆಕ್ಷನ್ನಿಂದ ಸಾಕಷ್ಟು ದುಷ್ಪರಿಣಾಮಗಳು ಇರುವುದೂ ಕಂಡುಬಂದಿದೆ.