ಬೆಂಗಳೂರು: ಅಂತಾರಾಷ್ಟ್ರೀಯ ಕರೆಗಳನ್ನು ಕನ್ವರ್ಟ್ ಮಾಡಿ ದೇಶದ ಭದ್ರತೆಗೆ ಕುತ್ತು ತಂದಿದ್ದ ಇಬ್ಬರನ್ನು ಈ ಮೊದಲು ಸಿಸಿಬಿ ಪೊಲೀಸರು ಬಂಧಿಸಿದ್ದರು. ಮತ್ತೆ ಇದೇ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿಯ ಭಯೋತ್ಪಾದನಾ ನಿಗ್ರಹ ದಳ (ಎಟಿಸಿ) ಕಾರ್ಯಾಚರಣೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಿದೆ.
ಕೇರಳ ಮಲ್ಲಪುರಂ ಮೊಹಮ್ಮದ್ ಬಷೀರ್, ಅನೀಶ್ ಅತ್ತಿಮನ್ನೀಲ್, ತಮಿಳುನಾಡಿನ ತೂತುಕುಡಿ ಸಂತನ್ ಕುಮಾರ್, ಸುರೇಶ್ ತಂಗವೇಲು, ಜೈ ಗಣೇಶ್ ಎಂಬುವರನ್ನು ಹೆಡೆಮುರಿ ಕಟ್ಟಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಬಂಧಿತರಿಂದ 3 ಸಾವಿರ ಸಿಮ್ ಕಾರ್ಡ್ಗಳು, 79 ಎಲೆಕ್ಟ್ರಾನಿಕ್ ಉಪಕರಣಗಳು, 23 ಲ್ಯಾಪ್ ಟಾಪ್, 14 ಯುಪಿಎಸ್, ಹಾಗೂ 17 ರೂಟರ್ಸ್ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣದಲ್ಲಿ ಕೇರಳದಲ್ಲಿ ಇನ್ನಿಬ್ಬರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಶೀಘ್ರದಲ್ಲಿ ಪತ್ತೆ ಹಚ್ಚಲಾಗುವುದು ಎಂದಿದ್ದಾರೆ.
- ಕೊರಿಯರ್ ಮೂಲಕ ಸಿಮ್ ಕಳುಹಿಸುತ್ತಿದ್ದ ಆರೋಪಿಗಳು
ಬಂಧಿತ ಆರೋಪಿಗಳ ಪೈಕಿ ಸಂತನ್ ಕುಮಾರ್ ಎಂಬಾತ ತಮಿಳುನಾಡಿನಲ್ಲಿ ಮೊಬೈಲ್ ಕಂಪನಿಯೊಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ. ಸುರೇಶ್ ತಂಗವೇಲು ಹಾಗೂ ಜೈ ಗಣೇಶ್ ಎಂಬುವರು ಸಿಮ್ ಸರ್ವಿಸ್ಗಳ ಪ್ರೊವೈಡರ್ಗಳಾಗಿದ್ದರು. ಪರಿಚಿತನಾಗಿದ್ದ ಇಬ್ರಾಹಿಂ ಹಾಗೂ ತಲೆಮರೆಸಿಕೊಂಡಿರುವ ಆರೋಪಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ತಮಿಳುನಾಡು ಹಾಗೂ ಕೇರಳದಿಂದ ಬೆಂಗಳೂರಿಗೆ ಕೊರಿಯರ್ ಮುಖಾಂತರ ಸಿಮ್ಗಳನ್ನು ಸರಬರಾಜು ಮಾಡುತ್ತಿದ್ದರು. ಕಳೆದೊಂದು ವರ್ಷದಿಂದ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಆರೋಪಿಗಳಿಗೆ ಇಬ್ರಾಹಿಂ ಕಮೀಷನ್ ನೀಡುತ್ತಿದ್ದ. ಹಣದಾಸೆಗೆ ಅಂಗಡಿಗೆ ಬರುವ ಸಾರ್ವಜನಿಕರಿಂದ ಗೊತ್ತಾಗದೆ ಅವರ ಹೆಸರಿನಲ್ಲಿ ದಾಖಲಾತಿ ಪಡೆದು ಸಿಮ್ ಕಾರ್ಡ್ ಖರೀದಿಸಿ ಕೊರಿಯರ್ ಮೂಲಕ ಬೆಂಗಳೂರಿಗೆ ಕಳುಹಿಸುತ್ತಿದ್ದರು. ಇಬ್ರಾಹಿಂ ಬಂಧನದಲ್ಲಿದ್ದಾಗಲೇ ಆತನ ಹೆಸರಿನಲ್ಲಿ ನಗರಕ್ಕೆ ಬಂದಿದ್ದ ಕೊರಿಯರ್ ಪಾರ್ಸೆಲ್ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
- ಮದ್ಯಪ್ರಾಚ್ಯ ದೇಶಗಳಿಂದ ಹೆಚ್ಚು ಕರೆ
ಐಎಸ್ಡಿ ಕರೆಗಳ ದಂಧೆಯಲ್ಲಿ ಕೆಲ ವರ್ಷಗಳಿಂದ ತೊಡಗಿಸಿಕೊಂಡಿದ್ದರೂ ದೂರ ಸಂಪರ್ಕ ಇಲಾಖೆಗೆ ಸೇರಿದಂತೆ ಅನುಮಾನ ಬಂದಿರಲಿಲ್ಲ. ಹೆಚ್ಚಾಗಿ ಮಧ್ಯಪ್ರಾಚ್ಯ ದೇಶಗಳಿಂದ ಒಳಬರುವ ಐಎಸ್ಡಿ ಕರೆಗಳನ್ನು ಸ್ಥಳೀಯ(ಲೋಕಲ್) ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರು. ಆದರೆ ಎಷ್ಟು ಕರೆಗಳನ್ನು ಲೋಕಲ್ ಕರೆಗಳಾಗಿ ಮಾರ್ಪಡಿಸಿದ್ದಾರೆ ಎಂಬುದರ ಬಗ್ಗೆ ನಿಖರವಾಗಿ ತಿಳಿದುಬಂದಿಲ್ಲ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳು ಎಲೆಕ್ಟ್ರಾನಿಕ್ ಉಪಕರಣ ನಿರ್ವಹಣೆ ಹಾಗೂ ಐಎಸ್ಡಿ ಕರೆಗಳ ಪರಿವರ್ತನೆ ಜಾಲದಲ್ಲಿ ತೊಡಗಿಸಿಕೊಂಡಿದ್ದರು. ಇವರನ್ನು ಬಂಧಿಸಿದರೆ ಯಾವ ದೇಶಗಳ ಟೆಲಿಫೋನ್ ಸರ್ವರ್ಗಳ ಮೂಲಕ ಕರೆಗಳು ಬರುತ್ತಿದ್ದವು ಎಂಬುದರ ಬಗ್ಗೆ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ಬ್ರೋಕರ್ ಮೂಲಕ ಮನೆ ಬಾಡಿಗೆ ಪಡೆದಿದ್ದ ಆರೋಪಿಗಳು
ಸಿಕ್ಕಿಬಿದ್ದಿರುವ ಆರೋಪಿಗಳು ನಗರದ ಮಡಿವಾಳ, ಸುದ್ದುಗುಂಟೆಪಾಳ್ಯ, ಬಿಟಿಎಂ ಲೇಔಟ್ ಹಾಗೂ ಮೈಕೊ ಲೇಔಟ್ನಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ಬ್ರೋಕರ್ಗಳನ್ನು ಸಂಪರ್ಕಿಸಿ ಮನೆ ಬಾಡಿಗೆ ಪಡೆದುಕೊಂಡಿದ್ದರು. ಮಾಲೀಕರೊಂದಿಗೆ ಲಿಖಿತವಾಗಿ ಕರಾರು ಸಹ ಮಾಡಿಸಿಕೊಂಡಿದ್ದರು. ಸಣ್ಣ ಮನೆಗಳಾಗಿ ಬಾಡಿಗೆ ಪಡೆಯುತ್ತಿದ್ದ ಆರೋಪಿಗಳು ದಂಧೆ ಬಗ್ಗೆ ಸ್ಥಳೀಯರಿಗೆ ಒಂಚೂರು ಸುಳಿವು ಸಿಕ್ಕಿರಲಿಲ್ಲ. ಯಾರಾದರೂ ಕೇಳಿದರೆ ಇಂಟರ್ನೆಟ್ಗೆ ಸಂಬಂಧಿಸಿದ ವಸ್ತುಗಳಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಿದ್ದರು.