ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿರುವ ರಿಂಗ್ ರಸ್ತೆಗೆ ಡಾ. ಪುನೀತ್ ರಾಜ್‌ಕುಮಾರ್ ರಸ್ತೆ ಎಂದು ನಾಮಕರಣ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಉದ್ಘಾಟನೆ ಮಾಡಿದರು. ಇದೇ ವೇಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಿದರು.
ಹೊರ ವರ್ತುಲ ರಸ್ತೆಯ ನಾಯಂಡಹಳ್ಳಿ ಜಂಕ್ಷನ್ನಿಂದ ಬನ್ನೇರುಘಟ್ಟವರೆಗಿನ ಸಂಪರ್ಕ ರಸ್ತೆಗೆ ದಿ. ಡಾ. ಪುನೀತ್ ರಾಜ್‌ಕುಮಾರ್ ಹೆಸರು ನಾಮಕರಣ ಮಾಡಲಾಯಿತು. ಸ್ಥಳದಲ್ಲಿದ್ದ ಅಭಿಮಾನಿಗಳು ಪುನೀತ್ ಪರ ಘೋಷಣೆ ಕೂಗಿದರು. ಸಿಎಂ ಸಹ ಅಭಿಮಾನಿಗಳತ್ತ ಕೈ ಬೀಸಿದರು. ಕಾರ್ಯಕ್ರಮದಲ್ಲಿ ಬೊಂಬೆ ಹೇಳುತೈತಿ ಹಾಡು ಹಾಡಿದ ಸಿಎಂ ಎಲ್ಲಾ ಕಲಾವಿದರೊಂದಿಗೆ ದನಿಗೂಡಿಸಿದರು. ಸಚಿವರು, ಶಾಸಕರು ಸಾಥ್ ಕೊಟ್ಟರು.
ಬಳಿಕ ಮಾತನಾಡಿದ ಸಿಎಂ, 2 ಉದ್ಯಾನವನ ಉದ್ಘಾಟನೆ ಮಾಡಿದ್ದೇನೆ. ಸಚಿವ ಅಶೋಕ್ಗೆ ಧನ್ಯವಾದ. ಅಪ್ಪು ಹೆಸರಿಡೋ ಮೂಲಕ ಅವರ ನೆನಪಿಗೆ ಮತ್ತೊಂದು ಗೌರವ ನೀಡಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಟ್ಟ ಶಿವರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಧನ್ಯವಾದಗಳು ಎಂದರು.
ರಾಜಕೀಯ ಭಾಷಣ: ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದ ರಾಜ್ಯವಾಗಿದೆ. ಮುಂದೆಯೂ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತದೆ. 6 ಸಾವಿರ ಕೋಟಿ ಅನುದಾನದಲ್ಲಿ ಬೆಂಗಳೂರು ಅಭಿವೃದ್ಧಿ ಆಗುತ್ತಿದೆ. ಇವತ್ತು ಎಲ್ಲಾ ಕ್ಷೇತ್ರಕ್ಕೆ ಹೋಗಿದ್ದೆ. ಆ ಕ್ಷೇತ್ರದ ಶಾಸಕರು ಸಾಕಷ್ಟು ಅಭಿವೃದ್ಧಿಪಡಿಸಿದ್ದಾರೆ. 6 ಬಾರಿ ಅಶೋಕ್ ಅವರು ಪದ್ಮನಾಭನಗರಕ್ಕೆ ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರಂತಹ ಜನೋಪಯೋಗಿ ಶಾಸಕರು ಸಿಗೋದು ಕಷ್ಟ. ಪದ್ಮನಾಭನಗರ ನಿರಂತರ ಅಭಿವೃದ್ಧಿಯಾಗಬೇಕು ಅಂದ್ರೆ ಅಶೋಕ್ಗೆ ಬೆಂಬಲ ಕೊಡಬೇಕು ಎಂದು ವೇದಿಕೆ ಮೇಲೆ ರಾಜಕೀಯ ಭಾಷಣ ಮಾಡಿದರು.
ಅಪ್ಪು, ಅಂಬರೀಶ್ ಸ್ಮಾರಕ: ಪುನೀತ್ ಸಣ್ಣ ವಯಸ್ಸಲ್ಲಿ ದೊಡ್ಡ ಕೆಲಸ ಮಾಡಿ ಹೋಗಿದ್ದಾರೆ. ಹಣಕ್ಕೆ ಲೆಕ್ಕ ಹಾಕಬಹುದಾರೆ ಅಪ್ಪು ಪ್ರೀತಿಗೆ ಲೆಕ್ಕ ಹಾಕೋಕೆ ಆಗಲ್ಲ. ಶರಣರನ್ನು ಮರಣದಲ್ಲಿ ನೋಡು ಅನ್ನೋ ಮಾತಿನಂತೆ ಅಪ್ಪುನನ್ನು ಮರಣದಲ್ಲಿ ನೋಡಿದೆ. ಪುನೀತ್ ರಾಜ್‌ಕುಮಾರ್ ಒಬ್ಬ ಸಾಧಕ. ಸಾಧಕನಿಗೆ ಸಾವು ಅಂತ್ಯ ಅಲ್ಲ, ಸಾವಿನ ನಂತರ ಬದುಕುವುದು ಸಾಧನೆ. ಅಪ್ಪು ಮನಸು ಹೃದಯ ಎಲ್ಲಾ ನಮ್ಮ ನಡುವೆ ಇದೆ. ಅವರ ಹೆಸರಲ್ಲಿ ಸ್ಮಾರಕ ಮಾಡೋಕೆ ಎಲ್ಲರ ಒತ್ತಾಯ ಇದೆ. ಅಪ್ಪು ಸಮಾಧಿಯ ಬಳಿ ಅಪ್ಪು ಸ್ಮಾರಕ ಸರ್ಕಾರ ಮಾಡಿಕೊಡುತ್ತೆ. ಅವರ ಸ್ಮಾರಕ ಮಾಡುವಂತ ಭಾಗ್ಯ ನನ್ನದು. ಅವರ ಜೀವನ ಸ್ಮರಣೆಯಾಗಿ ಅಪ್ಪು ಸ್ಮಾರಕ ನಿರ್ಮಾಣ ಆಗುತ್ತೆ.
ಅಂಬರೀಶ್ ಸಹ ನನ್ನ ಸ್ನೇಹಿತ. ಅವರ ಸ್ಮಾರಕ ಈಗಾಗಲೇ ಸಿದ್ದವಾಗಿದೆ. ಮಾರ್ಚ್ ಮೊದಲನೇ ವಾರ ಅಂಬರೀಶ್ ಸ್ಮಾರಕ ಉದ್ಘಾಟನೆ ಮಾಡೋಣ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ನಾಮಕರಣ ಮಾಡಬೇಕು ಅಂತಾ ಒತ್ತಾಯ ಇದೆ. ಹಾಗಾಗಿ ಆ ರಸ್ತೆಗೆ ಅಂಬರೀಶ್ ಅವರ ನಾಮಕರಣ ಮಾಡಬೇಕು ಅಂತಾ ತೀರ್ಮಾನ ಮಾಡಿದ್ದೇವೆ. ಅವರ ನಾಮಕರಣ ಮಾಡಿದ್ದಕ್ಕೆ ಅಂಬರೀಶ್ ಕೂಡ ಖುಷಿಪಡುತ್ತಾರೆ. ಸದ್ಯದಲ್ಲೇ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ನಾಮಕರಣ ಮಾಡಲಾಗುತ್ತೆ ಎಂದು ಸಿಎಂ ಹೇಳಿದರು.
ಕಂದಾಯ ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ, ಉದಯ ಗರುಡಾಚಾರ್, ಎಂ.ಕೃಷ್ಣಪ್ಪ, ನಟ ರಾಘವೇಂದ್ರ ರಾಜಕುಮಾರ್, ಅಭಿಷೇಕ್ ಅಂಬರೀಶ್ ಹಾಗೂ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಇದನ್ನೂ ಓದಿ: ನಾನು ಹಿಂದೂ ವಿರೋಧಿ ಅಲ್ಲ; ಮನುವಾದ, ಹಿಂದುತ್ವದ ವಿರೋಧಿ: ಸಿದ್ದರಾಮಯ್ಯ