ಬೆಂಗಳೂರು: ಕನ್ನಡದ ಹಿರಿಯ ಬರಹಗಾರ, ಇತಿಹಾಸತಜ್ಞ ಹಾಗೂ ಸಂಶೋಧಕ ಚಿದಾನಂದಮೂರ್ತಿ ನಿಧನ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸಂತಾಪ ಸೂಚಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಸಂಶೋಧಕ ಚಿದಾನಂದಮೂರ್ತಿ ನಿಧನದ ಸುದ್ದಿ ತಿಳಿದು ದುಃಖವಾಯಿತು. ಅವರ ಸಂಶೋಧನೆ ಮತ್ತು ಸಾಹಿತ್ಯದ ಜೊತೆಯಲ್ಲಿ ಅವರ ನೇರ ನಡೆ-ನುಡಿ, ಸೈದ್ಧಾಂತಿಕ ಭಿನ್ನಾಭಿಪ್ರಾಯ ಮೀರಿದ ಸ್ನೇಹಶೀಲ ಗುಣವನ್ನು ನಾಡು ಸದಾ ಸ್ಮರಿಸುತ್ತದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದಿದ್ದಾರೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕನ್ನಡದ ಶಕ್ತಿ ಕೇಂದ್ರ ಸ್ಥಾಪಿಸಿದ ಚಿಮೂ ಅಹರ್ನಿಶಿ ದುಡಿದವರು. ಅವರು ಕನ್ನಡ ಗರುಡ ಎಂದು ಟ್ವೀಟ್ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಮ್ಮ ನಾಡಿನ ಹಿರಿಯ ಸಾಹಿತಿ, ಇತಿಹಾಸ ತಜ್ಞ, ಕನ್ನಡ ನೆಲ ಜಲ ಭಾಷೆ ಸಂಸ್ಕೃತಿಗಳ ಬಗ್ಗೆ ನಿರಂತರವಾಗಿ ಹೋರಾಡಿದವರು. ಅವರ ಕುಟುಂಬದ ಸದಸ್ಯರು ಹಾಗೂ ಅನುಯಾಯಿಗಳಿಗೆ ನೋವನ್ನು ಸಹಿಸುವ ಶಕ್ತಿ ಭಗವಂತ ಕೊಡಲಿ ಹಾಗೂ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಕನ್ನಡ ನಾಡು ಬಡವಾಗಿದೆ. ಅವರ ಸಂಶೋಧನೆ, ಸಾಹಿತ್ಯ ಮತ್ತು ಕನ್ನಡದ ಭಾಷೆ ಬಗ್ಗೆ ಇದ್ದ ಅವರ ಕಾಳಜಿಯನ್ನು ಸದಾ ಸ್ಮರಿಸಲಾಗುತ್ತದೆ. ದೇವರು ಅವರ ಆತ್ಮಕ್ಕೆ ಶಾಂತಿ ಮತ್ತು ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.
ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಹೆಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ಗಣ್ಯರು ಚಿದಾನಂದಮೂರ್ತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.