ಬೆಂಗಳೂರು: ಬಿಜೆಪಿ ಕುದುರೆ ವ್ಯಾಪಾರ ನಡೆಸಿ, ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿ ಮೈತ್ರಿ ಪಕ್ಷದ ನಾಯಕರು ರಾಜಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.
ಕಾಂಗ್ರೆಸ್ ವರಿಷ್ಠ ಗುಲಾಂ ನಬಿ ಆಜಾದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ದೋಸ್ತಿ ಸರ್ಕಾರದ ನಾಯಕರು ರಾಜಭವನಕ್ಕೆ ಮುತ್ತಿಗೆ ಹಾಕಲು ಪ್ಲಾನ್ ಮಾಡಿರುವ ಹಿನ್ನೆಲೆ ರಾಜಭವನದ ಮುಂದೆ ಖಾಕಿ ಕಣ್ಗಾವಲು ಇಟ್ಟಿದೆ.
ಕಾಂಗ್ರೆಸ್ ವರಿಷ್ಠ ನಾಯಕ ಗುಲಾಂ ನಬಿ ಆಜಾದ್ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ನಂತರ ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ದೂರು ನೀಡಲಿದ್ದಾರೆ. ದೂರಿನಲ್ಲಿ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ. ಹೀಗಾಗಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಿದ್ದಾರೆ.
ಮತ್ತೊಂದೆಡೆ ಬಿಜೆಪಿಯ ಹಿರಿಯ ನಾಯಕರ ನಿಯೋಗ ಕೂಡ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರದ ಕೆಲ ಲೋಪಗಳನ್ನು ರಾಜ್ಯಪಾಲರಿಗೆ ತಿಳಿಸಲಿದ್ದಾರೆ. ಹೀಗಾಗಿ ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ನೇತೃತ್ವದಲ್ಲಿ ಇಬ್ಬರು ಎಸಿಪಿ, ಸೇರಿದಂತೆ 100 ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.