ಬೆಂಗಳೂರು: ಕನಕ ಗುರುಪೀಠದ ಸ್ವಾಮೀಜಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಮಾಧುಸ್ವಾಮಿ ಪ್ರತಿಯಾಗಿ ಸಿಎಂ ಯಡಿಯೂರಪ್ಪ ಸ್ವಾಮೀಜಿ ಹಾಗೂ ಕುರುಬ ಸಮುದಾಯದ ಕ್ಷಮೆ ಕೇಳಿದ್ದು ಈ ವಿಷಯವನ್ನು ಇಲ್ಲಿಗೆ ಬಿಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸ್ವಾಮೀಜಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ, ಕ್ಷಮೆ ಕೇಳಲ್ಲ: ಮಾಧುಸ್ವಾಮಿ
ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದ ಬಳಿ ಮಾತನಾಡಿ, ಕನಕದಾಸರು ಮಹಾಸಂತರಾಗಿದ್ದಾರೆ, ಕಾಗಿನೆಲೆಯನ್ನು ನಾನು ಹೇಗೆ ಅಭಿವೃದ್ಧಿಪಡಿಸಿದ್ದೇನೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಹುಳಿಯಾಳ್ ಸರ್ಕಲ್ಗೆ ಕನಕದಾಸರ ಹೆಸರು ಇಡಲು ನಮ್ಮದೇನು ತಕರಾರು ಇಲ್ಲ. ಮಾಧುಸ್ವಾಮಿಗೂ ಯಾವುದೇ ತಕರಾರು ಇಲ್ಲ. ಮಾಧುಸ್ವಾಮಿ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ನಾನು ಈ ಬಗ್ಗೆ ಕ್ಷಮೆ ಕೇಳುತ್ತೇನೆ, ಕನಕದಾಸರ ಬಗ್ಗೆ ಗೊಂದಲ ಸೃಷ್ಟಿ ಮಾಡುವುದು ಬೇಡ ಎಂದರು.
ಅನರ್ಹರು ಎನ್ನಲು ಸಿದ್ದರಾಮಯ್ಯ ಯಾರು:? ಸಿದ್ದರಾಮಯ್ಯ ಹೋದ ಹೋದ ಕಡೆಯಲ್ಲಿ ಮನಬಂದಂತೆ ಮಾತನಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ಅನರ್ಹರನ್ನು ಚುನಾವಣೆಗೆ ನಿಲ್ಲಬಹುದು ಎಂದು ಹೇಳಿದೆ, ಹೀಗಿರುವಾಗ ಅವರನ್ನು ಅನರ್ಹರು ಅನ್ನೋಕೆ ಇವರು ಯಾರು?. ಅನರ್ಹರು ಯಾರು ಅನ್ನೋದನ್ನು ರಾಜ್ಯದ ಜನರು ತೀರ್ಮಾನ ಮಾಡ್ತಾರೆ. ಈ ಸರ್ಕಾರ ಉಳಿಯಬೇಕು ಎಂದು ಆ ಅನರ್ಹರು ತೀರ್ಮಾನ ಮಾಡಿದ್ದಾರೆ. ಅದಕ್ಕೆ ರಾಜ್ಯದ ಜನರು ಕೂಡ ಅವರನ್ನು ಕಾಪಾಡುತ್ತಾರೆ 15ಕ್ಕೆ 15 ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ನೀವು ಮಾಡಿದ್ದು ಏನು?: ನಿಮ್ಮ ಯೋಗ್ಯತೆಗೆ ಒಂದು ಸೀಟು ಗೆಲ್ಲೋಕೆ ಆಗಿಲ್ಲ, ಲೋಕಸಭೆಯಲ್ಲಿ ಅಧಿಕೃತವಾಗಿ ವಿರೋಧ ಪಕ್ಷದ ಸ್ಥಾನ ಸಿಕ್ಕಿಲ್ಲ. ಆದರೂ ಕೂಡ ಬೊಬ್ಬೆ ಹೊಡೆದುಕೊಂಡು, ತನ್ನ ಬಿಟ್ಟು ಬೇರೆ ಯಾರು ರಾಜಕಾರಣದಲ್ಲಿ ಇಲ್ಲ ಅಂತಾ ಹೊರಟಿದ್ದೀರ. ನೀವು ಕಾಂಗ್ರೆಸ್ ನಲ್ಲಿ ಒಬ್ಬಂಟಿ ಆಗಿದ್ದೀರಾ ಅನ್ನೋದು ಮರೆಯಬೇಡಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಿಎಂ ಯಡಿಯೂರಪ್ಪ ತಿರುಗೇಟು ನೀಡಿದರು.
ಮಂಡ್ಯದಲ್ಲಿ ಸುಮಲತಾ ಜೊತೆ ನಾನು ಮಾತನಾಡಿದ್ದೇನೆ: ಹಿಂದಿನ ಚುನಾವಣೆ ವೇಳೆ ಸುಮಲತಾ ಅವರಿಗೆ ನಾವು ಸಹಕಾರ ಕೊಟ್ಟಿದ್ದೆವು. ಕೆ ಆರ್ ಪೇಟೆ ಕಾರ್ಯಕರ್ತರ ಸಭೆಗೆ ಅವರು ಬಂದು ಕುಳಿತಿದ್ದರು. ಮತ್ತೊಮ್ಮೆ ಅವರ ಜೊತೆ ಮಾತನಾಡುತ್ತೇನೆ, ಅವರ ಸಹಕಾರ ನಮಗೆ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.