ಬೆಂಗಳೂರು: ಇಡೀ ಕರ್ನಾಟಕ ಲಾಕ್ ಡೌನ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಖಾಸಗಿ ಆಸ್ಪತ್ರೆಗಳ ಮುಖಂಡರೊಂದಿಗೆ ನಡೆಸಿದ ಮಹತ್ವದ ಸಭೆಯಲ್ಲಿ ಸಲಹೆ ವ್ಯಕ್ತವಾಗಿದ್ದು, ಪ್ರತಿ ಪಕ್ಷದ ನಾಯಕರೊಂದಿಗೆ ಈ ಬಗ್ಗೆ ಚರ್ಚಿಸಿ ಸಿಎಂ ನಿರ್ಧಾರ ಕೈಗೊಳ್ಳಲಿದ್ದಾರೆ.
ಇಂದು ಸಂಜೆಯ ಒಳಗೆ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರ ಜೊತೆ ಮತ್ತು ಇತರೆ ಮುಖಂಡರ ಜೊತೆ ಚರ್ಚಿಸಿ ನಿರ್ಧಾರ ಪ್ರಕಟಿಸಲಿದ್ದಾರೆ. ಪ್ರತಿಪಕ್ಷದ ನಾಯಕರ ಜೊತೆ ಚರ್ಚಿಸಲು ನಿರ್ಧಾರ ಪ್ರಕಟಿಸುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ಸಿಎಂ ಹಿಂದಿನ ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ಪ್ರಕಟಣೆ ನೀಡಿಲ್ಲ. ಚರ್ಚಿಸಿದ ನಂತರವೇ ಸೂಕ್ತ ನಿರ್ಧಾರ ಪ್ರಕಟಿಸಲು ಸಿಎಂ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ಲಾಕ್ ಡೌನ್ ಬಗ್ಗೆ ಸಂಜೆ ಸಿಎಂ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ತೀರ್ಮಾನ ಪ್ರಕಟಿಸಲಿದ್ದಾರೆ. ಅತಿ ಅವಶ್ಯಕತೆ ಇರುವ ಸೇವೆಗಳು ಬಿಟ್ಟು ಮಿಕ್ಕಿದ್ದೆಲ್ಲಾ ಬಂದ್ ಆಗಲಿದೆ. 5 ರಿಂದ 6 ಇಲಾಖೆಗಳು ಮಾತ್ರ ಕಾರ್ಯನಿರ್ವಹಣೆ ಮಾಡಲಿವೆ. ಪ್ರಮುಖವಾಗಿ ಆರೋಗ್ಯ, ಗೃಹ, ಕಂದಾಯ, ಅರಣ್ಯ, ಸೇರಿದಂತೆ ಪ್ರಮುಖ ಇಲಾಖೆಗಳು ಕಾರ್ಯ ನಿರ್ವಹಣೆ ಮಾಡಲಿವೆ. ಇನ್ನೂ ಉಳಿದೆಲ್ಲಾ ಇಲಾಖೆಗಳೆಲ್ಲವೂ ಬಂದ್ ಮಾಡಲು ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳಿಂದ ದೃಢಪಟ್ಟಿದೆ.
ಬೆಂಗಳೂರು ಕರಗ ಇಲ್ಲ. ಈ ಬಾರಿ ಬೆಂಗಳೂರು ಕರಗ ಇರೋದಿಲ್ಲ. ಸಭೆಯಲ್ಲಿ ಕರಗ ನಡೆಸದೆ ಇರುವುದಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಖಾಸಗಿ ಅಥವಾ ಸರ್ಕಾರಿ ಕೇವಲ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲು ಸಲಹೆ ಬಂದಿದ್ದು, ಸಿಎಂ ಇವೆಲ್ಲವನ್ನು ಸಂಜೆಯ ಸುದ್ದಿಗೋಷ್ಠಿಯಲ್ಲಿ ತಿಳಿಸಲಿದ್ದಾರೆ.