ಬೆಂಗಳೂರು: 14 ಮಂದಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರಕ್ಕೆ ಗಂಡಾಂತರ ತಂದಿದ್ದರೂ ಎದೆಗುಂದದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ನೀರಾವರಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಆಶ್ಚರ್ಯ ಮೂಡಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಕೃಷ್ಣಾಭಾಗ್ಯ ಜಲನಿಗಮ, ಕಾವೇರಿ ನೀರಾವರಿ ನಿಗಮ ಹಾಗೂ ಕರ್ನಾಟಕ ನೀರಾವರಿ ನಿಗಮಗಳ ನಿರ್ದೇಶಕ ಮಂಡಳಿ ಸಭೆ ನಡೆಸಿದ್ದು, ಸಭೆಯಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತಿತರ ಹಿರಿಯ ಅಧಿಕಾರಿಗಳು ಹಾಗೂ ನಿರ್ದೇಶಕ ಮಂಡಳಿ ಸದಸ್ಯರು ಭಾಗವಹಿಸಿದ್ದರು.

ಇಷ್ಟೊಂದು ರಾಜಕೀಯ ಚಟುವಟಿಗಳ ಮಧ್ಯೆಯೂ ನೀರಾವರಿಗೆ ಸಂಬಂಧಪಟ್ಟ ಮಾಹಿತಿಯನ್ನು ಅಧಿಕಾರಿಗಳಿಂದ ಸಿಎಂ ಪಡೆದುಕೊಂಡಿದ್ದು ಮಾತ್ರ ವಿಶೇಷವಾಗಿತ್ತು.