ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರಲೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿಶೇಷ ಪೂಜೆ ಸಲ್ಲಿಸಿದರು. ಚಾಮರಾಜಪೇಟೆಯ ಶಂಕರ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿಶ್ವ ಹಿಂದು ಪರಿಷತ್ ಹಾಗೂ ವಿವೇಕಾನಂದ ಸೇವಾ ಸಂಸ್ಥೆಯಿಂದ ಧನ್ವಂತರಿ ಹೋಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಬಿಎಸ್ವೈ, ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಕೋವಿಡ್-19ನಿಂದ ರಾಜ್ಯ ಮುಕ್ತವಾಗಬೇಕು. ಜನರು ನೆಮ್ಮದಿಯಿಂದ ಜೀವನ ನಡೆಸಬೇಕು. ಈ ನಿಟ್ಟಿನಲ್ಲಿ ಇಂದು ದೇವರಲ್ಲಿ ಪೂಜೆ ಸಲ್ಲಿಸಿದ್ದೇನೆ ಎಂದರು. ರಾಜ್ಯದಲ್ಲಿ ಹಣಕಾಸಿನ ಪರಿಸ್ಥಿತಿ ಸರಿಯಿಲ್ಲ. ಆದರೂ 1,000 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇನೆ ಎಂದರು.
ರೈತರಿಗೆ 2,000 ರೂಪಾಯಿ ಕೊಡುವ ಯೋಜನೆಗೆ ಹಣ ಬಿಡುಗಡೆ ಮಾಡಲಾಗಿದ್ದು, ಇದರಿಂದ ರಾಜ್ಯದ 50 ಲಕ್ಷ ರೈತರಿಗೆ ಅನುಕೂಲವಾಗಲಿದೆ. ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದರೂ ರೈತರು ನೆಮ್ಮದಿಯಾಗಿ ಬದುಕಬೇಕು ಎಂದರು. ಮಳೆಗಾಲದ ಸಂದರ್ಭದಲ್ಲಿ ಆ ಹಣ ರೈತನಿಗೆ ಸಿಗಬೇಕು. ಅದಕ್ಕಾಗಿ ಈ ಹಣ ಬಿಡುಗಡೆ ಮಾಡಿದ್ದೇನೆ ಎಂದರು.
ಕೊರೊನಾ ಕಾಟದಿಂದ ತಪ್ಪಿಸಿಕೊಳ್ಳಲು ಏನೆಲ್ಲಾ ಪ್ರಯತ್ನ ಮಾಡಬೇಕೋ ಅದೆಲ್ಲವೂ ನಾವು ಮಾಡುತ್ತಿದ್ದೇವೆ. ಬಹಳ ಬಿಗಿಯಾದ ಕ್ರಮಗಳನ್ನು ಕೂಡ ತೆಗೆದುಕೊಳ್ಳುತ್ತಿದ್ದೇವೆ. ನಮ್ಮೆಲ್ಲಾ ಸ್ನೇಹಿತರ ಜೊತೆಗೂಡಿ ಕೋವಿಡ್-19 ತಡೆಯಲು ಶಕ್ತಿ ಮೀರಿ ಕೆಲಸ ಮಾಡ್ತಿದ್ದೇವೆ ಎಂದು ಹೇಳಿದರು.
ಗುರುವಾರ ರಾಜ್ಯಾದ್ಯಂತ ಮಾಸ್ಕ್ ಡೇ ಆಚರಣೆ
ರಾಜ್ಯದಲ್ಲಿ ಕೊರೊನಾ ಪರೀಕ್ಷೆ ಕಡಿಮೆ ಮಾಡಿಲ್ಲ. ಇನ್ನೂ ಟೆಸ್ಟಿಂಗ್ ಹೆಚ್ಚಿಗೆ ಮಾಡುತ್ತಿದ್ದೇವೆ. ನಿರೀಕ್ಷೆಗೆ ಮೀರಿ ಟೆಸ್ಟಿಂಗ್ ಹೆಚ್ಚಿಗೆ ಮಾಡುತ್ತಿದ್ದೇವೆ. ದೇಶದಲ್ಲಿ ಅತೀ ಹೆಚ್ಚು ಟೆಸ್ಟಿಂಗ್ ಮಾಡುತ್ತಿರುವ ರಾಜ್ಯ ನಮ್ಮದು ಮಾತ್ರ. ಇನ್ನು ಮುಂದೆ ಜನರ ಆರೋಗ್ಯದ ಹಿತದೃಷ್ಟಿಯಿಂದ ಗುರುವಾರದಂದು ಮಾಸ್ಕ್ ಡೇ ಆಚರಿಸಲಾಗುವುದು ಎಂದು ತಿಳಿಸಿದರು.
ಪಿಎಂ ಜೊತೆ ವಿಡಿಯೋ ಕಾನ್ಫರೆನ್ಸ್
ನಾಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೊ ಕಾನ್ಫರೆನ್ಸ್ ಇದೆ. ಜನರು ಜೀವನ ನಡೆಸಲು ಅನುಕೂಲ ಮಾಡಿಕೊಡಲು ಹಾಗೂ ಆರ್ಥಿಕ ಸುಧಾರಣೆಗೆ ಅವಕಾಶ ಮಾಡಿಕೊಡುವಂತೆ ಪ್ರಧಾನಿಗಳಲ್ಲಿ ಮನವಿ ಮಾಡುತ್ತೇನೆ ಎಂದರು.