ಬೆಂಗಳೂರು: ನಮ್ಮೆಲ್ಲರ ಅಚ್ಚುಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬದುಕು, ಸಾರ್ವಜನಿಕವಾಗಿ ಅವರ ನಡವಳಿಕೆ, ಬಡವರಿಗೆ ಸಹಾಯ ಮಾಡಿದ ರೀತಿ ಆದರ್ಶಪ್ರಾಯ ಹಾಗೂ ಪ್ರೇರಣಾದಾಯಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರ್‌ಟಿ ನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಪ್ಪು ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ. ಅವರ ಕೆಲಸಗಳನ್ನು ನಾವೆಲ್ಲರೂ ಸ್ಮರಿಸಬೇಕು. ಅವರು ಬದುಕಿದ್ದಿದ್ದರೆ ಅವರ 47ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದೆವು. ಅವರನ್ನು ಕಳೆದುಕೊಂಡು ದುಃಖದಲ್ಲಿದ್ದರೂ ಕೂಡ ಅವರ ಬದುಕು ನಮಗೆ ಸ್ಫೂರ್ತಿಯಾಗಿದೆ ಎಂದರು.
ಜೇಮ್ಸ್ ಚಿತ್ರಕ್ಕೆ ಶುಭ ಕೋರಿದ ಸಿಎಂ: ಪುನೀತ್ ಅಭಿನಯದ ಸಿನಿಮಾ ಜೇಮ್ಸ್ ಚಿತ್ರ ಇಂದು ಬಿಡುಗಡೆಯಾಗಿದೆ. ಸಿನಿಮಾ ಯಶಸ್ವಿಯಾಗಲಿ ಎಂದು ಮುಖ್ಯಮಂತ್ರಿಗಳು ಶುಭಾಶಯ ಕೋರಿದರು.
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ: ಪುನೀತ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲು ಆದಷ್ಟು ಶೀಘ್ರವಾಗಿ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ದಿನಾಂಕ ನಿಗದಿ ಮಾಡಲಾಗುವುದು. ಪುನೀತ್ ಹಾಗೂ ಡಾ. ರಾಜಕುಮಾರ್ ಅವರಿಗೆ ಗೌರವ ಬರುವ ರೀತಿಯಲ್ಲಿ ಕಾರ್ಯಕ್ರಮ ಏರ್ಪಡಿಸಲು ಸಮಿತಿ ರಚಿಸಲಾಗುವುದು ಎಂದರು.
ಬಿಎಸ್ವೈ ನಮನ: ನಾಡಿನ ಪ್ರೀತಿ ಗಳಿಸಿದ್ದ ಸಹೃದಯಿ ಕಲಾವಿದ, ಡಾ.ರಾಜ್ ಕುಟುಂಬದ ಕುಡಿ, ಚಿಕ್ಕ ವಯಸ್ಸಿನಲ್ಲಿಯೇ ಅಪಾರವಾದದ್ದನ್ನು ಸಾಧಿಸಿ, ಅಕಾಲಿಕವಾಗಿ ನಮ್ಮನ್ನಗಲಿದ ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಆ ಸಾಧಕ ಚೇತನಕ್ಕೆ ಅಭಿಮಾನಪೂರ್ವಕ ನಮನಗಳು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಪ್ರೀತಿಯ ಅಪ್ಪುಗಾಗಿ 17ನೇ ಸೀಟ್ ಬುಕ್ ಮಾಡಿದ ಅಭಿಮಾನಿ