ಬೆಂಗಳೂರು: ಸಿದ್ದರಾಮಯ್ಯ ಅವರು ಕಾಲ ಕಾಲಕ್ಕೆ ಸತ್ಯ ಹೇಳುವ ಟೀಮ್ ಇಟ್ಟುಕೊಳ್ಳಬೇಕು. ಅರುಳೋ ಮರುಳೋ ಅನ್ನೋ ಪರಿಸ್ಥಿತಿಗೆ ಅವರು ಬಂದಿದ್ದಾರೆ. ಸ್ವತಃ ಅಲ್‌ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಮಾತಾಡಿರೋ ವಿಡಿಯೋ ಇದೆ. ಅದನ್ನು ನೋಡಬೇಕು, ಇಲ್ಲದಿದ್ರೆ ಅವರು ಅವರ ಸ್ಥಾನಕ್ಕೆ ತಕ್ಕಂತೆ ಮಾತನಾಡ್ತಿಲ್ಲ ಅನ್ನುವುದು ಗೊತ್ತಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸಂಜೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಚಂದ್ರು ಕೊಲೆ ಸಂಬಂಧ ಅವರ ತಾಯಿ ಹೇಳಿಕೆ ನೋಡಿದ್ದೇನೆ. ಬೈಕ್ ಅಪಘಾತದಿಂದ ಯಾರಿಗೂ ಪೆಟ್ಟಾಗಿಲ್ಲ. ಯಾರಿಗೂ ಡ್ಯಾಮೇಜ್ ಆಗಿಲ್ಲ, ಭಾಷೆಯೂ ಒಂದು ನೆಪವಾಗಿದೆ. ಇದರಲ್ಲಿ ಕೋಮು ಕದಡುವ ವಿಚಾರ ಎಲ್ಲಿದೆ?. ಕೊಲೆ ಮಾಡುವ ಮಾನಸಿಕ ಸ್ಥಿತಿ ಯಾಕಿದೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಅಪ್ಪಾಜಿ ಕಟ್ಟಿದ ಶಕ್ತಿಧಾಮಕ್ಕೆ ಯುಕ್ತಿಯಾಗಿ ನಿಲ್ಲುತ್ತೇನೆ: ಶಿವರಾಜ್ ಕುಮಾರ್
ಕೆಲವೊಮ್ಮೆ ಸತ್ಯ ಸಂಗತಿ ಹೇಳುವುದಕ್ಕಿಂತ ಮುಂದೆ ಆಗುವ ಗಲಾಟೆ ತಡೆಯುವ ಪ್ರಯತ್ನ ಮಾಡುತ್ತಾರೆ ಎಂದು ಗೃಹ ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಗಲಭೆಗೆ ಕಾರಣ ಆಗಬಾರದು ಅಂತ ಸುಳ್ಳು ಹೇಳಿಸಿದ್ದಾರೆ ಅಂತ ಭಾವಿಸಿದ್ದೇನೆ. ಅದು ಏನೇ ಆಗಿರಲಿ ತನಿಖೆ ಅಡ್ಡದಾರಿಗೆ ಹೋಗಬಾರದು. ಕಾಂಗ್ರೆಸ್ ರಾಜಕೀಯ ಕಾರಣಕ್ಕೆ ಮಗು ಚಿವುಟುವ ಕೆಲಸ ಮಾಡಿದೆ ಎಂದು ಟೀಕಿಸಿದರು.
ಖಲಿಸ್ತಾನ್ ಚಳವಳಿಗೆ ಗೊಬ್ಬರ ಹಾಕಿದ್ದು ಕಾಂಗ್ರೆಸ್, ಅದಕ್ಕೆ ಬಲಿಯಾಗಿದ್ದು ಇಂದಿರಾಗಾಂಧಿ ಎಂದ ಸಿ.ಟಿ.ರವಿ, ಹಿಜಾಬ್ ವಿಚಾರದಲ್ಲೂ ಹಾಗೆಯೇ ಅಗಿದೆ. ಹಿಜಾಬ್ ವಿಚಾರದಲ್ಲಿ ವಕೀಲರನ್ನು ನೇಮಿಸಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿ ವಿರುದ್ಧ ಅಲ್ಪ ಸಂಖ್ಯಾತರನ್ನೆತ್ತಿಕಟ್ಟಬೇಕು ಅನ್ನುವುದು ಅವರ ಅಜೆಂಡಾ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಬದಲಾವಣೆ ಕಪೋಲಕಲ್ಪಿತ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಜೊತೆ ಸಾಕಷ್ಟು ಚರ್ಚೆ ಮಾಡಿದ್ದಾರೆ. ಹಾಗಿದ್ದ ಮೇಲೆ ಬದಲಾವಣೆ ಕಪೋಲ ಕಲ್ಪಿತ. ಬಿಜೆಪಿಯಲ್ಲಿ ಯಾವುದೂ ಶಾಶ್ವತ ಅಲ್ಲ. ಎಲ್ಲಾ ಬದಲಾವಣೆ ಆಗುತ್ತಿರುತ್ತದೆ. ಕಾಲಕಾಲಕ್ಕೆ ಎಲ್ಲರೂ ಬದಲಾವಣೆ ಆಗುತ್ತಿರುತ್ತಾರೆ ಎಂದರು.