ಬೆಂಗಳೂರು : ಲಕ್ಷ ದ್ವೀಪದ ಬಳಿ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ನಗರದಲ್ಲಿ ಸರಿಯುತ್ತಿರುವ ಮಳೆ ಮೂರು ದಿನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಿಲಿಕಾನ್ ಸಿಟಿಯಲ್ಲಿ ಇಂದು ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಗುರುವಾರ ಬೆಂಗಳೂರಿನ ದಕ್ಷಿಣ ಭಾಗಗಳಲ್ಲಿ ಭಾರಿ ಮಳೆಯಾಗಿದೆ. ವಿದ್ಯಾಪೀಠದಲ್ಲಿ ಅತಿ ಹೆಚ್ಚು (72 ಮಿ.ಮೀ) ಮಳೆ ಸುರಿದಿದೆ. ನಿನ್ನೆ ಸಂಜೆ ಆರಂಭವಾದ ಮಳೆ ಸತತವಾಗಿ ಹಲವು ಗಂಟೆಗಳು ಗುಡುಗು, ಮಿಂಚು ಸಹಿತ ಸುರಿಯಿತು. ಇದರಿಂದಾಗಿ ಕೆಲ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಯಿತು. ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತ್ತು.
50ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರಿನಿಂದ ಹಾನಿ : ಸಿಲಿಕಾನ್ ಸಿಟಿಯ ಕಾಮಾಕ್ಯ ಚಿತ್ರಮಂದಿರದ ಸುತ್ತಮುತ್ತ 50ಕ್ಕೂ ಹೆಚ್ಚು ಮನೆಗಳಿಗೆ ತಡ ರಾತ್ರಿ ಮಳೆ ನೀರು ನುಗ್ಗಿ ಅಕ್ಕಿ, ಬೇಳೆ ಸೇರಿದಂತೆ ದಿನಬಳಕೆ ವಸ್ತುಗಳು ಹಾಳಾಗಿವೆ. ಭಾರಿ ಮಳೆಗೆ ಚರಂಡಿ ಹೊರಗಡೆ ಬಂದು ಕಾರುಗಳು ದ್ವಿಚಕ್ರ ವಾಹನಗಳು ಕೊಚ್ಚಿ ಹೋಗಿರುವುದು ಸಹ ಬೆಳಕಿಗೆ ಬಂದಿದೆ.
ಬಿಬಿಎಂಪಿ ನಿಯಂತ್ರಣ ಕೊಠಡಿಗೆ ದೂರುಗಳ ಮಹಾಪೂರ : ಕೆಲ ಬಡಾವಣೆಗಳ ರಸ್ತೆಗಳಲ್ಲಿ ಮರಗಳು ಬಿದ್ದಿರುವ ಬಗ್ಗೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಸಾಕಷ್ಟು ದೂರುಗಳು ಬಂದಿವೆ. ಬಿಬಿಎಂಪಿ ಸಿಬ್ಬಂದಿಯು ತುಂಡರಿಸಿ ಬಿದ್ದಿದ್ದ ಮರದ ರೆಂಬೆಕೊಂಬೆಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು : ಮಳೆ ಸುರಿದ ಪರಿಣಾಮ ವಾಹನ ಸವಾರರು ಸಾಕಷ್ಟು ಪರದಾಡುವಂತಾಗಿತ್ತು. ಮಳೆಯಿಂದಾಗಿ ರಾಜಕಾಲುವೆಗಳಿಂದ ಉಕ್ಕಿ ಹರಿದ ಪರಿಣಾಮ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿದಿತ್ತು. ಪಶ್ಚಿಮ ಹಾಗೂ ಉತ್ತರ ಭಾಗದಲ್ಲಿ ಕೂಡ ಕೊಳಚೆ ನೀರು ಮನೆಗಳಿಗೆ ನುಗ್ಗಿದೆ.
ಎಲ್ಲೆಲ್ಲಿ, ಎಷ್ಟು ಮಳೆ? : ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ 40 ಮಿ.ಮೀ, ವಿಶ್ವೇಶ್ವರಪುರ 44, ಕೋರಮಂಗಲ 34, ಚಾಮರಾಜಪೇಟೆ 30, ಕಾಟನ್‌ಪೇಟೆ 20, ಯಲಹಂಕ 40 ಹಾಗೂ ಜಯನಗರ, ಜಿ.ಪಿ. ನಗರಗಳಲ್ಲಿ 35 ಮಿ.ಮೀ ಮಳೆಯಾಗಿದೆ.
ರಾಜ್ಯದ ವಿವಿಧೆಡೆ ಮಳೆ : ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಯೆಲ್ಲೋ ಅಲರ್ಟ್ ಪೋಷಿಸಲಾಗಿದೆ. ರಾಜ್ಯದಲ್ಲಿ ಪೂರ್ವ ಮುಂಗಾರು ಶುರುವಾಗಿದ್ದು, ಹಲವೆಡೆ ಉತ್ತಮ ಮಳೆ ಬೀಳುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆ ಬರಲಿದೆ ಎಂದು ಹವಾಮಾನ ಇಲಾಖೆಯ ತಜ್ಞ ಸದಾನಂದ ಅಡಿಗ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವರುಣನ ಆರ್ಭಟ: ಹಲವು ಮನೆಗಳಿಗೆ ನುಗ್ಗಿದ ನೀರು, ಜನ ಜೀವನ ಅಸ್ತವ್ಯಸ್ತ