ಬೆಂಗಳೂರು: ಕೇಂದ್ರದ ರೋಜಗಾರ್ ಮೇಳದ ಪ್ರಯುಕ್ತ ಕರ್ನಾಟಕದಲ್ಲಿ ಇಂದು 1000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿದ್ದೇವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ವರ್ಚುವಲ್ ಮೂಲಕ ಇಂದು ಪ್ರಧಾನಿ ಮೋದಿ 75 ಸಾವಿರ ಯುವಕರಿಗೆ ನೇಮಕಾತಿ ಪತ್ರ ವಿತರಿಸಿದ್ದು, ಈ ಸಂಬಂಧ ನಗರದ ಜ್ಞಾನಭಾರತಿ ಸಭಾಂಗಣದಲ್ಲಿ ರೋಜಗಾರ್ ಮೇಳ ನಡೆಯಿತು. ಸರ್ಕಾರದ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಯುವಕರಿಗೆ ಕೇಂದ್ರ ಸಂಸದೀಯ ಮತ್ತು ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನೇಮಕಾತಿ ಪತ್ರವನ್ನು ವಿತರಿಸಿದರು.
ನೇಮಕಗೊಂಡ ಯುವಕರಿಗೆ ಶುಭ ಕೋರಿದ ಜೋಶಿ, ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. 10 ಲಕ್ಷ ಆಕಾಂಕ್ಷಿಗಳಿಗೆ ಉದ್ಯೋಗದ ಭರವಸೆಯನ್ನು ನೀಡಿರುವ ಪ್ರಧಾನಿ ಮೋದಿಯವರು, ಅದನ್ನು ಶೀಘ್ರದಲ್ಲಿಯೇ ನೆರವೇರಿಸಲಿದ್ದಾರೆ. ಇದರ ಮೊದಲ ಹಂತವಾಗಿ ಇಂದು 75,000 ಯುವಕರಿಗೆ ನೇಮಕಾತಿ ಪತ್ರವನ್ನು ಪ್ರಧಾನಿ ಮೋದಿ ಅವರು ಖುದ್ದಾಗಿ ವರ್ಚುವಲ್ ವೇದಿಕೆಯ ಮೂಲಕ ಹಸ್ತಾಂತರಿಸಿದ್ದಾರೆ. ಮುಂದಿನ 12 ತಿಂಗಳು ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಕೊಟ್ಟ ಮಾತಿನಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿಗಳನ್ನು ಮಾಡುವತ್ತ ಮಹತ್ತರ ಹೆಜ್ಜೆಗಳನ್ನು ಇಟ್ಟಿದ್ದಾರೆ. ಒಬ್ಬ ದೂರದೃಷ್ಟಿಯುಳ್ಳ ನಾಯಕ ದೇಶದ ಅಭಿವೃದ್ಧಿಗಾಗಿ ಯಾವ ರೀತಿ ಬದಲಾವಣೆಗಳನ್ನು ತರಬಹುದು ಎಂಬುದಕ್ಕೆ ಇದೇ ಉದಾಹರಣೆಯಾಗಿದೆ ಎಂದು ಪ್ರಹ್ಲಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕೋವಿಡ್ ಹಾಗೂ ಉಕ್ರೇನ್, ರಷ್ಯಾ ಯುದ್ಧದ ಬಳಿಕ ಅನೇಕ ಸಮಸ್ಯೆಗಳು ಉದ್ಭವಿಸಿದೆ. ಈ ಮಧ್ಯೆಯೂ ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ. ನಮಗೆ ಬೇಕಾಗಿರುವುದಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಆಗ್ತಿದೆ. ಉದ್ಯೋಗ ಮೇಳದಲ್ಲಿ ಭಾರತ ಬಹುದೊಡ್ಡ ಹೆಜ್ಜೆ ಇಟ್ಟಿದೆ. ಸ್ಟಾರ್ಟ್ ಅಪ್ನಲ್ಲೂ ಕೂಡ ಬಹಳಷ್ಟು ನಮ್ಮ ದೇಶ ಮುಂದಿದೆ. ಅದರಲ್ಲೂ ಬೆಂಗಳೂರು ಐಟಿ ಹಬ್ ಆಗ್ತಿದೆ ಎಂದರು.
ಬ್ರಿಟಿಷರು ನಮ್ಮನ್ನು ಇಲಿ ಆಡಿಸುವವರು. ಇಲಿಗಳನ್ನು ತಿನ್ನುವವರು ಅಂತ ಒಂದು ಕಾಲದಲ್ಲಿ ಹೇಳ್ತಿದ್ರು. ಇಂದು ಆರ್ಥಿಕ ವ್ಯವಸ್ಥೆಯಲ್ಲಿ ನಾವು ಇಂಗ್ಲೆಂಡ್ ಹಿಂದಿಕ್ಕಿ ನಾಲ್ಕನೇ ಸ್ಥಾನದಲ್ಲಿ ಇದ್ದೇವೆ. ಎಲ್ಲಿ ಅವಕಾಶ ಸಿಗುತ್ತೋ ಅಲ್ಲಿ ನಾವು ಮುನ್ನುಗ್ಗುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಅಶ್ವತ್ಥ್ ನಾರಾಯಣ, ಸಂಸದ ಪಿ.ಸಿ. ಮೋಹನ್ ಹಾಗೂ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ ಪಿಎಫ್ಐ ಬ್ಯಾನ್ ವಿರೋಧಿಸಿದರೆ ಜನರೇ ಒದೆಯುತ್ತಾರೆ: ಪ್ರಹ್ಲಾದ್ ಜೋಶಿ